ಬೆಂಗಳೂರು:- ಟೆನ್ನಿಸ್ ಕೃಷ್ಣರವರು ಒಂದು ಕಾಲದಲ್ಲಿ ತುಂಬಾ ಬ್ಯುಸಿಯಾಗಿದ್ದ ನಟ. ಆದರೆ, ಈಗ ಈ ಹಿರಿಯ ನಟನಿಗೆ ತಾತ್ಸಾರದ ಶಿಕ್ಷೆ ನೀಡಲಾಗುತ್ತಿದೆ ಎಂಬ ಪ್ರಶ್ನೆ ಉದ್ಭವಿಸುವಂತೆ ಆಗಿದೆ. ಸಾಕಷ್ಟು ಕಡೆ ಆಗಾಗ್ಗೆ ಟೆನ್ನಿಸ್ ಕೃಷ್ಣ ಅವರು ಈ ಬಗ್ಗೆ ನೋವು ತೋಡಿಕೊಳ್ಳುತ್ತಲೇ ಇದ್ದಾರೆ.
ಟೆನ್ನಿಸ್ ಕೃಷ್ಣ ಮಾತ್ರವಲ್ಲದೆ ಈ ಹಿಂದೆ ಬೆಳ್ಳಿ ತೆರೆ ಮೇಲೆ ಮಿಂಚಿದ್ದ ಸಾಕಷ್ಟು ನಟರು ಈಗ ಕಾಣುವುದು ಅಪರೂಪ.
YES.. ಸ್ಯಾಂಡಲ್ವುಡ್ ಈಗ ಮೊದಲಿನಂತಲ್ಲ, ಹೆಮ್ಮಾರವಾಗಿ ಬೆಳೆದು ನಿಂತಿದೆ. ಅಣ್ಣಾವ್ರು, ಅಂಬರೀಶ್, ವಿಷ್ಣುವರ್ಧನ್, ಶಂಕರ್ನಾಗ್ ಹೀಗೆ ಸಾಕಷ್ಟು ನಟರು ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿ ಹೋಗಿದ್ದಾರೆ. ಈ ಎಲ್ಲಾ ಮೇರು ನಟರೊಂದಿಗೆ ನಟನೆ ಮಾಡಿ ಸೈ ಎನಿಸಿಕೊಂಡಿದ್ದ ಟೆನ್ನಿಸ್ ಕೃಷ್ಣ ಅವರು ಅವಕಾಶಕ್ಕೆ ಬೇಡುವ ಪರಿಸ್ಥಿತಿ ಬಂದಿದೆ ಎಂದರೆ ತಪ್ಪಾಗಲಾರದು.
ಒಂದು ಕಾಲದಲ್ಲಿ ಡಾ.ರಾಜ್ಕುಮಾರ್ ಅವರಂತವರೇ ನಮ್ಮನ್ನು ಕರೆಸಿ ನಟನೆ ಮಾಡಿಸುತ್ತಿದ್ದರು. ಆದರೆ, ಈಗಿನ ಹೀರೋಗಳು ನಮ್ಮನ್ನು ಮರೆತಿದ್ದಾರೆ ಎಂದು ವಿಜಯ್ ಮೈಲಾರ್ ಎಂಬ ಯೂಟ್ಯೂಬ್ ಚಾನಲ್ಗೆ ನೀಡಿದ ಸಂದರ್ಶನದಲ್ಲಿ ತಮ್ಮನೋವು ತೋಡಿಕೊಂಡಿದ್ದಾರೆ. ಇವತ್ತು ಕನ್ನಡ ಚಿತ್ರರಂಗ ಉಳಿದಿರೋದು ಉತ್ತರ ಕರ್ನಾಟಕದಿಂದ ಎಂದ ಅವರು, ಬೆಂಗಳೂರು ಥಿಯೇಟರ್ ನೋಡಿದ್ರೆ ನಿಮಗೇ ಗೊತ್ತಾಗುತ್ತದೆ ಎಂದಿದ್ದಾರೆ.
ನನ್ನ ಅಭಿಮಾನಿಗಳು ಹಾಗೂ ಸ್ನೇಹಿತರು ಆಗಾಗ್ಗೆ ನನಗೆ ಫೋನ್ ಮಾಡಿ ಕೇಳುತ್ತಲೇ ಇರುತ್ತಾರೆ. ಹಿಂದೆ ದೊಡ್ಡ ದೊಡ್ಡ ನಟರೆಲ್ಲಾ ಸಿನಿಮಾ ಇಲ್ಲದಿದ್ದಾಗ ನಾಟಕ ಕಂಪೆನಿಗಳಿಗೆ ಡೇಟ್ ಕೊಡುತ್ತಿದ್ದರು. ಆ ಸಮಯಲ್ಲಿ ಭಾರೀ ಜನರು ಬರುತ್ತಿದ್ದರು, ಲಾಠಿ ಚಾರ್ಜ್ ಸಹ ಮಾಡಲಾಗುತ್ತಿತ್ತು. ಈ ನಡುವೆ ನಾನು ಸಹ ವೃತ್ತಿ ರಂಗಭೂಮಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸಾಕಷ್ಟು ಡೇಟ್ಗಳನ್ನು ನೀಡಿತ್ತಲೇ ಇದ್ದೆ . ಆದರೆ, ಈಗ ನನ್ನದೇ ಆದ ವೈಯುಕ್ತಿಕ ಕೆಲಸಗಳಿಂದ ಅದರಲ್ಲಿ ತೊಡಗಿಕೊಳ್ಳಲು ಆಗುತ್ತಿಲ್ಲ ಎಂದು ವಿವರಿಸಿದರು.
ಹೊಸ ನಾಯಕ ನಟರ ಸಿನಿಮಾಗಳಲ್ಲಿ ಬಹುತೇಕ ಎಲ್ಲದರಲ್ಲೂ ಇದ್ದೇನೆ. ಆದರೆ, ದೊಡ್ಡ ದೊಡ್ಡ ಹೀರೋಗಳನ್ನು ನಮ್ಮನ್ನು ಮರೆತಿದ್ದಾರೆ ಎಂದು ಒತ್ತಿ ಹೇಳಿದ್ದಾರೆ. ಅವರಿಗೆ ಡೇಟ್ ಇಲ್ಲ ಎಂದು ಕೆಲವರು ಹೇಳಿ ಹಿರಿಯ ಕಲಾವಿದರಿಗೆ ಮೋಸ ಮಾಡುತ್ತಿದ್ದಾರೆ. ಪರಿಣಾಮ ಇಂದಿನ ಚಿತ್ರರಂಗದ ಪರಿಸ್ಥಿತಿ ಹೇಗಾಗಿದೆ ನೋಡಿ ಎಂದರು.
ಕಲಾವಿದರಿಗೆ ಈ ರೀತಿ ಅನ್ಯಾಯ ಮಾಡಬಾರದು, ಹಾಗಂದ ಮಾತ್ರಕ್ಕೆ ಹೊಸ ಕಲಾವಿದರಿಗೆ ಅವಕಾಶ ನೀಡಬಾರದು ಅಂತೇನು ಇಲ್ಲ. ಅವರನ್ನು ನಾಲ್ಕು ಜನ ತೆಗೆದುಕೊಂಡರೆ ನಮ್ಮಲ್ಲಿ ಇಬ್ಬರಿಗಾದರೂ ಅವಕಾಶ ನೀಡಿ. ಈಗಾಗಲೇ ನಾವು ಸಾಕಷ್ಟು ದೊಡ್ಡ ದೊಡ್ಡ ನಟರನ್ನು ಕಳೆದುಕೊಂಡಿದ್ದೇವೆ. ಅವರ ಮಾರ್ಗರ್ಶನದಲ್ಲಿ ನಡೆದುಕೊಂಡು ಬಂದಿದ್ದೇವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹೊಸ ಹೀರೋಗಳ ಸಿನಿಮಾ ನೋಡಲು ಜನರು ಬರುವುದೇ ಇಲ್ಲ. ಆದರೆ, ಅವರೇ ಅಲ್ಲವೇ ಮುಂದಿನ ದಿನಗಳಲ್ಲಿ ಚಲನಚಿತ್ರ ಉಳಿಸುವವರು. ಅವರ ಸಿನಿಮಾಗಳನ್ನೂ ಸಹ ನೋಡಬೇಕು ಎಂದು ಅವರು ಟೆಲಿಗ್ರಾಮ್ನಲ್ಲಿ ನಿನ್ನೆ ಲಾಂಚ್ ಆದ ಸಿನಿಮಾಗಳು ಇಂದೇ ಬಂದು ಬಿಡುತ್ತವೆ. ಇದನ್ನು ತಡೆಗಟ್ಟುವವರು ಯಾರು? ಇದರಿಂದ ನಿರ್ಮಾಪಕರಿಗೆ ಅನ್ಯಾಯವಾಗುತ್ತಿದೆ ಎಂದು ಬೇಸರ ಹೊರ ಹಾಕಿದರು.