ಬೆಂಗಳೂರು:- ಬಡವರು ಹಾಗೂ ಜನಸಾಮಾನ್ಯರಿಗೆ ಅಗ್ಗದ ಬೆಲೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಒದಗಿಸುತ್ತಿರುವ ಜನೌಷಧಿ ಕೇಂದ್ರಗಳಿಗೆ ಅವಕಾಶ ನೀಡದಿರಲು ಕಾರಣವೇನು, ಸರ್ಕಾರಿ ಆಸ್ಪತ್ರೆಗಳ ವೈದ್ಯರು ಜೆನೆರಿಕ್ ಔಷಧಿ ಚೀಟಿ ಬರೆಯುವುದಕ್ಕೂ ಜನಔಷಧಿ ಕೇಂದ್ರಗಳಿಗೆ ಅವಕಾಶ ನೀಡದಿರುವುದಕ್ಕೂ ಸಂಬಂಧವೇನು ಎಂದು ರಾಜ್ಯ ಸರ್ಕಾರವನ್ನು ಆರ್.ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿ, ಇಂದಿರಾ ಕ್ಯಾಂಟೀನ್‌ಗಳಲ್ಲಿ ಕಡಿಮೆ ದರದಲ್ಲಿ ಆಹಾರ ಸಿಗುತ್ತದೆ ಎನ್ನುವ ಕಾರಣಕ್ಕೆ ಬೇರೆ ಹೋಟೆಲ್‌ಗಳು ತೆರೆಯಲು ಅವಕಾಶ ನೀಡುವುದಿಲ್ಲ ಎನ್ನುವುದಕ್ಕೆ ಸಾಧ್ಯವೇ. ಜನರು ತಮಗೆ ಸಕಾಲಕ್ಕೆ, ಕೈಗೆಟಕುವ ಬೆಲೆಗೆ, ಉತ್ತಮ ಗುಣಮಟ್ಟದ ಔಷಧಿ ಎಲ್ಲಿ ಸಿಗುತ್ತದೋ ಅಲ್ಲಿ ಖರೀದಿ ಮಾಡುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಕ್ಕರೆ ಅದನ್ನೇ ಪಡೆಯುತ್ತಾರೆ. ಅದಕ್ಕಾಗಿ ಜನಔಷಧಿ ಕೇಂದ್ರಗಳನ್ನ ಮುಚ್ಚುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರೇ, ರಾಜ್ಯ ಸರ್ಕಾರ ಕಾರ್ಪೊರೇಟ್ ಔಷಧ ಕಂಪನಿಗಳು, ಖಾಸಗಿ ಮೆಡಿಕಲ್ ಶಾಪ್‌ಗಳ ಲಾಬಿಗೆ ಮಣಿದು ಜನೌಷಧಿ ಕೇಂದ್ರಗಳಿಗೆ ಅವಕಾಶ ನೀಡುತ್ತಿಲ್ಲವೋ ಅಥವಾ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತಿದೆ ಎಂಬ ಅಸೂಯೆಯೋ ಎಂದು ಟೀಕಿಸಿದ್ದಾರೆ.
ಈಗ ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಬರೆದುಕೊಟ್ಟ ಚೀಟಿಯಲ್ಲಿರುವ ಔಷಧಿ ಸ್ಟಾಕ್ ಇಲ್ಲದಿದ್ದರೆ, ಪಾಪ ಬಡವರು ಏನು ಮಾಡಬೇಕು. ಏನಾದರೂ ಅನಾಹುತ ಆದರೆ ಅದಕ್ಕೆ ಯಾರು ಹೊಣೆ, ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಜನರಿಗೆ ಒಳ್ಳೆಯದಾಗುವ ಕೆಲಸ ಮಾಡುವ ಮನಸ್ಸಿಲ್ಲ. ಇನ್ನೊಬ್ಬರು ಮಾಡಿದರೆ ಅದನ್ನೂ ಸಹಿಸಲ್ಲ. ಈ ಪಾಪಿ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಶಾಪ ತಟ್ಟದೇ ಇರಲ್ಲ ಎಂದು ಎಚ್ಚರಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ಖಾಸಗಿ ಮೆಡಿಕಲ್ ಶಾಪ್‌ಗಳಿಂದ ಔಷಧಿ ಖರೀದಿಸುವಂತೆ ಚೀಟಿ ಬರೆದುಕೊಡುವ ಸಂಸ್ಕೃತಿ ಕೈಬಿಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ರೋಗಿಗಳಿಗೆ ಉಚಿತವಾಗಿ ಔಷಧಿಗಳು ಸಮರ್ಪಕವಾಗಿ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳ ಔಷಧಿ ಕೇಂದ್ರಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳನ್ನ ತೆರೆಯಲು ಸಲ್ಲಿಕೆಯಾಗಿದ್ದ 31 ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ. ಜೆನರಿಕ್ ಔಷಧಿಗಳ ಖರೀದಿಗೆ ಬಿಪಿಪಿಐನೊಂದಿಗೆ ಕೆಎಸ್‌ಎಂಎಸ್‌ಎಲ್‌ನವರು ವಿಶೇಷ ದರಗಳನ್ನು ರೂಪಿಸಲು ಸೂಚಿಸಲಾಗಿದ್ದು, ಪರ್ಯಾಯವಾಗಿ ಆಸ್ಪತ್ರೆಗಳು ಬಿಪಿಪಿಐನಿಂದ ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ಉಚಿತವಾಗಿ ವಿತರಿಸಬಹುದು. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳಲ್ಲಿರುವ ಔಷಧಿ ಕೇಂದ್ರಗಳಲ್ಲಿಯೇ ಔಷಧಿಗಳನ್ನು ಉಚಿತವಾಗಿ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.