ಬೆಂಗಳೂರು:- ಕೋವಿಡ್-19 ರೋಗಕ್ಕೆ ಕಾರಣವಾದ ಕಾರಣವಾದ ಎರಡು ಹೊಸ ರೂಪಾಂತರಿ ಕೊರೊನಾ ವೈರಸ್ ಭಾರತದಲ್ಲಿ ಪತ್ತೆಯಾಗಿವೆ ಎಂದು ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ತಿಳಿಸಿದೆ.
ಹೊಸದಾಗಿ ಪತ್ತೆಯಾಗಿರುವ ಕೋವಿಡ್-19 ರೂಪಾಂತರ NB.1.8.1 ನ ಒಂದು ಪ್ರಕರಣ ದಾಖಲಾಗಿದ್ದರೆ, LF.7 ರೂಪಾಂತರಿಯ ನಾಲ್ಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. INSACOG ನ ದತ್ತಾಂಶದ ಪ್ರಕಾರ, ಏಪ್ರಿಲ್‌ನಲ್ಲಿ ತಮಿಳುನಾಡಿನಲ್ಲಿ NB.1.8.1 ನ ಒಂದು ಪ್ರಕರಣವನ್ನು ಗುರುತಿಸಲಾಗಿದ್ದು ಮತ್ತು ಮೇ ತಿಂಗಳಲ್ಲಿ ಗುಜರಾತ್‌ನಲ್ಲಿ LF.7 ನ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ ಎಂದು ಪಿಟಿಐ ವರದಿಯಲ್ಲಿ ತಿಳಿಸಿದೆ.
LF.7 ಮತ್ತು NB.1.8 ಉಪ ರೂಪಾಂತರಿ ವೈರಸ್ ಬಗ್ಗೆ ಇದೇ ತಿಂಗಳಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದ್ದು, ಇವು ನಿಗಾದಲ್ಲಿರುವ ರೂಪಾಂತರಿ ವೈರಸ್ ಎಂದು ವರ್ಗೀಕರಿಸಿದೆ. ಅಂದರೆ ಈ ವೈರಸ್ ಬಗ್ಗೆ ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ.
ಈಗ ಲಭ್ಯವಿರುವ ಪುರಾವೆಗಳನ್ನು ಪರಿಗಣಿಸಿ, NB.1.8.1 ನಿಂದ ಹೆಚ್ಚಿನ ಅಪಾಯ ಇಲ್ಲ ಎಂದು ಹೇಳಿದೆ. ಜಾಗತಿಕ ಮಟ್ಟದಲ್ಲಿ ಈ ವೈರಸ್ ಅಪಾಯಕಾರಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಪ್ರಸ್ತುತ ಅನುಮೋದಿತ ಕೋವಿಡ್-19 ಲಸಿಕೆಗಳು ರೋಗಲಕ್ಷಣ ಮತ್ತು ತೀವ್ರ ಕಾಯಿಲೆಯ ವಿರುದ್ಧ ಈ ರೂಪಾಂತರಿ ವೈರಸ್ ವಿರುದ್ಧ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದೆ.
ಭಾರತದಲ್ಲಿ ಪತ್ತೆಯಾಗಿರುವ ಹೆಚ್ಚಿನ ಪ್ರಕರಣಗಳು JN.1 ಆಗಿದೆ. ಪರೀಕ್ಷೆ ಮಾಡಿರುವ ಮಾದರಿಗಳಲ್ಲಿ 53% ರಷ್ಟು JN.1 ರೂಪಾಂತರಿಯಾಗಿದೆ. BA.2 ಶೇಕಡಾ 26 ರಷ್ಟಿದ್ದು ಓಮಿಕ್ರಾನ್ ಉಪವಂಶಾವಳಿಗಳು ಶೇಕಡಾ 20 ರಷ್ಟಿವೆ ಎಂದು ವರದಿ ತಿಳಿಸಿದೆ.
ಭಯಪಡುವ ಅಗತ್ಯವಿಲ್ಲ:
JN.1 ರೂಪಾಂತರಕ್ಕೆ ಸಂಬಂಧಿಸಿದ ಕೋವಿಡ್-19 ಪ್ರಕರಣಗಳ ಹೆಚ್ಚಳದ ಬಗ್ಗೆ ಭಯಪಡಬೇಡಿ ಎಂದು ವೈದ್ಯರು ಜನರಿಗೆ ಸಲಹೆ ನೀಡಿದ್ದಾರೆ. ಹೊಸ ತಳಿಯ ವೈರಸ್ ರೋಗ ಲಕ್ಷಣಗಳು ತೀವ್ರವಾಗಿಲ್ಲ ಮತ್ತು ಹೆಚ್ಚಿನ ರೋಗಿಗಳು ಸೌಮ್ಯ ಲಕ್ಷಣಗಳನ್ನು ಮಾತ್ರ ಹೊಂದಿರುವುದಾಗಿ ವರದಿಯಾಗಿದೆ.
ಭಾರತೀಯ ವೈದ್ಯಕೀಯ ಸಂಘದ ಜೂನಿಯರ್ ವೈದ್ಯರ ಜಾಲ (IMA JDN) ರಾಷ್ಟ್ರೀಯ ವಕ್ತಾರ ಡಾ.ಧ್ರುವ್ ಚೌಹಾಣ್ ಪಿಟಿಐ ಜೊತೆ ಮಾತನಾಡಿದ್ದು, ಓಮಿಕ್ರಾನ್ BA.2.86 ರ ವಂಶಸ್ಥರಾದ JN.1 ರೂಪಾಂತರದ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಈ ವೈರಸ್ ಬಗ್ಗೆ ಹೆಚ್ಚಿನ ಆತಂಕಪಡುವ ಅಗತ್ಯವಿಲ್ಲವಾದರೂ, ಜನರು ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳುವುದು, ಆಸ್ಪತ್ರೆಗಳು ಅಥವಾ ಜನದಟ್ಟಣೆಯ ಸ್ಥಳಗಳಲ್ಲಿ ಅಗತ್ಯವಿರುವಲ್ಲಿ ಮಾಸ್ಕ್ ಧರಿಸುವುದು ಮತ್ತು ಉಸಿರಾಟದ ನೈರ್ಮಲ್ಯವನ್ನು ಅನುಸರಿಸುವುದು ಸೇರಿದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.