ಬೆಂಗಳೂರು:- 2025ನೇ ಸಾಲಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿಯನ್ನ ಗೆದ್ದ “ಕನ್ನಡತಿ ಬಾನು ಮುಷ್ತಾಕ್” ಅವರು ಇಂದು ಮುಂಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಪ್ರತಿಷ್ಠಿತ ಪ್ರಶಸ್ತಿ ಗೆದ್ದು ವಾಪಸ್ ಬಂದ ಬಾನು ಮುಷ್ತಾಕ್‌ರಿಗೆ ಏರ್‌ಪೋರ್ಟ್‌ನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ.
ಯಕ್ಷಗಾನ ಮತ್ತು ಇತರ ಕಲಾತಂಡಗಳ ಕಲಾವಿದರು ಬಾನು ಮುಷ್ತಾಕ್ ಸಾಧನೆಯನ್ನ ಕನ್ನಡದ ನೆಲದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡು ಸಂಭ್ರಮಿಸಲಾಯಿತು.
ಎದೆಯ ಹಣತೆಗೆ ಪ್ರಶಸ್ತಿ:
ಬಾನು ಮುಷ್ತಾಕ್ ಅವರ ಎದೆಯ ಹಣತೆ ಸಣ್ಣ ಕಥೆಗಳ ಸಂಕಲನಕ್ಕೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಒಲಿದಿದೆ. ಈ ಕಥೆಯನ್ನ ʼಹಾರ್ಟ್ ಲ್ಯಾಂಪ್ʼ ಎಂಬ ಹೆಸರಲ್ಲಿ ದೀಪಾ ಭಸ್ತಿ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದರು. ಹಾಗಾಗಿ ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಇಬ್ಬರೂ ಕೂಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತದ ಇತಿಹಾಸದಲ್ಲಿ ಬೂಕರ್ ಪ್ರಶಸ್ತಿ ಪಡೆದ ಭಾರತದ ಮೊದಲ ಸಣ್ಣ ಕಥೆಗಳ ಸಂಕಲನ ಎಂಬ ಹೆಗ್ಗಳಿಕೆಯೂ ಈ ಎದೆಯ ಹಣತೆ (ಹಾರ್ಟ್ ಲ್ಯಾಂಪ್) ಪಾತ್ರವಾಗಿದೆ.
ಎದೆಯ ಹಣತೆ ಎನ್ನೋದು ಮುಸ್ಲಿಂ ಹೆಣ್ಣುಮಗಳ ಸುತ್ತ ಸಾಗುವ ಒಂದು ಕಥೆಯಾಗಿದೆ. ʼಮದುವೆಯಾಗಿ ಐದು ಮಕ್ಕಳನ್ನ ಹಡೆದ ಮುಸ್ಲಿಂ ಹೆಣ್ಣುಮಗಳು ಪತಿಯಿಂದ ಪರಿತ್ಯಕ್ತಳಾಗುತ್ತಾಳೆ. ಆಕೆಯನ್ನ ಬಿಟ್ಟ ಗಂಡ ಬೇರೊಬ್ಬಳಲ್ಲಿ ಅನುರಕ್ತನಾಗುತ್ತಾನೆ. ಆ ಹೆಣ್ಣು ಮಗಳಿಗೆ ಏನು ಮಾಡಬೇಕು ಎಂದು ತೋಚದೆ ತವರು ಮನೆಗೆ ಬರುತ್ತಾಳೆ. ಆದರೆ, ಆಕೆಯ ಅಣ್ಣಂದಿರು ಹತ್ತಿರ ಸೇರಿಸೋದಿಲ್ಲ. ಗಂಡಾದವನು ಎಷ್ಟು ಬೇಕಾದರೂ ಮದುವೆ ಆಗಬಹುದು. ಹೆಣ್ಣಾಗಿ ನೀನೇ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕು ಎಂದು ಆಕೆಗೇ ಹೇಳುತ್ತಾರೆ. ಅದನ್ನೆಲ್ಲ ಸಹಿಸಲಾಗದ ಮಹಿಳೆ ಆತ್ಮಹತ್ಯೆಗೆ ಮುಂದಾಗುತ್ತಾಳೆ. ಆದರೆ, ಆಕೆಯ ಮಗಳೇ ಅದನ್ನ ಸಾಧ್ಯವಾಗಿಸೋದಿಲ್ಲ, ಹೀಗೆ ಕಥೆ ಸಾಗುತ್ತದೆ. ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ ‘ಹಾರ್ಟ್ ಲ್ಯಾಂಪ್’ ಅನುವಾದಿತ ಕೃತಿಗೆ ಪ್ರತಿಷ್ಠಿತ ಅಂತರರಾಷ್ಚ್ರೀಯ ಬೂಕರ್ ಪ್ರಶಸ್ತಿಯನ್ನು ಮೇ 20ರಂದು ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾನುರವರಿಗೆ ನೀಡಲಾಯಿತು. ಈ ವೇಳೆ ಅನುವಾದಕರಾದ ದೀಪಾ ಭಸ್ತಿ ಕೂಡ ಇದ್ದರು. ಈ ಇಬ್ಬರು ಕನ್ನಡದ ಮಹಿಳೆಯರನ್ನ ನೋಡಿ ನಮ್ಮ ರಾಜ್ಯದ ಜನರು ಮಾತ್ರವಲ್ಲ ದೇಶವೇ ಖುಷಿಪಟ್ಟಿದೆ. ದೀಪಾ ಭಸ್ತಿ ಅವರು ಈಗಾಗಲೇ ಬೆಂಗಳೂರು ತಲುಪಿದ್ದಾರೆ. ಇಂದು ಬಾನು ಮುಷ್ತಾಕ್ ಆಗಮಿಸಿದ್ದಾರೆ. ಅನುವಾದಿತ ಕೃತಿಗೆ ಪ್ರಶಸ್ತಿ ಸಿಕ್ಕಿದ್ದರೂ, ಮೂಲಕತೆಯೇ ಪ್ರಧಾನ ಆಗಿರುತ್ತದೆ.