ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಮುಂದುವರಿಯುತ್ತಿರುವ ಗಲಭೆಗಳು, ಮತೀಯ ಕೊಲೆಗಳು ಹೆಚ್ಚಾಗುತ್ತಲೆಯಿದ್ದು, ಇದಕ್ಕೆ ಕಾನೂನಿನ ಮೂಲಕ ಕಡಿವಾಣ ಹಾಕುವಂತೆ ಹಲವು ಬಾರಿ ರಾಜ್ಯ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರೂ ಯಾವುದೇ ಪ್ರಯೋಜನವಾಗದ ಕಾರಣ ಸ್ಥಳೀಯ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಹೀಗಾಗಿ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮುಖಂಡರು ಇಂದು ಸಾಮೂಹಿಕ ರಾಜೀನಾಮೆ ಕುರಿತು ಚರ್ಚಿಸಿ ನಿರ್ಧರಿಸಲು ಸಭೆ ಕರೆದಿದ್ದಾರೆ. ಈ ಮೂಲಕ ರಾಜೀನಾಮೆ ಸಲ್ಲಿಕೆ ಪ್ರಕ್ರಿಯೆ ಆರಂಭಿಸಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಹೈಕಮಾಂಡ್‌ಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ಇನ್ನು ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವೆಡೆ ಸಂಘ ಪರಿವಾರದಿಂದ ಆಗುತ್ತಿರುವ ದೌರ್ಜನ್ಯ, ಕೋಮು ಪ್ರಚೋದಿತ, ದ್ವೇಷ ಭಾಷಣ, ಅಬ್ದುಲ್ ರಹ್ಮಾನ್‌ರ ಬರ್ಬರ ಕೊಲೆಯನ್ನು ತಡೆಯಲು ಪೊಲೀಸರು ಮತ್ತು ಸರ್ಕಾರ ವಿಫಲವಾಗಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಮಾಜಿ ಮೇಯರ್ ಅಶ್ರಫ್ ತಿಳಿಸಿದ್ದಾರೆ.