ಬೆಂಗಳೂರು

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಹೈಕಮಾಂಡಿನ ಎಟಿಎಂ ಆಗಿದೆ.- ಬಿವೈವಿ

ಬೆಂಗಳೂರು:- ವಸತಿ ಇಲಾಖೆಯಡಿ ಅಲ್ಪಸಂಖ್ಯಾತರಿಗೆ ಶೇ 10 ಇದ್ದ ಮೀಸಲಾತಿಯನ್ನು ಶೇ 15ಕ್ಕೆ ಏರಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್’ ಆಧಾರದ ಮೇಲೆ ದೇಶದ ಹಿಂದೂಗಳು, ಅಲ್ಪಸಂಖ್ಯಾತರು ಸೇರಿ ಎಲ್ಲರಿಗೂ ನ್ಯಾಯ ಕೊಡುತ್ತಿದ್ದಾರೆ. ಮೋದಿಜೀ ಅವರು ಕೊಟ್ಟ ಕಿಸಾನ್ ಸಮ್ಮಾನ್ ಯೋಜನೆಯು ರೈತರಿಗೆ 6 ಸಾವಿರ ಜಮಾ ಆಗುತ್ತಿದ್ದು, ಇದು ಕೇವಲ ಹಿಂದೂಗಳಿಗೆ ಮಾತ್ರ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಧ್ಯಮದೊಂದಿಗೆ ಮಾತನಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಮಾತು ಮುಂದುವರೆಸಿದ ಅವರು ಮೋದಿಜೀ ಅವರ ಬೇಟಿ ಬಚಾವೊ, ಬೇಟಿ ಪಡಾವೊ ಕಾರ್ಯಕ್ರಮವು ಕೇವಲ ಹಿಂದೂ ಹೆಣ್ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಖಂಡಿತವಾಗಿ ಭಗವಂತ ಒಳ್ಳೆಯದು ಮಾಡಲು ಸಾಧ್ಯವಿಲ್ಲ. ಬಿಜೆಪಿ ಹೋರಾಟ ಒಂದು ಕಡೆ ಇದ್ದರೆ, ಮುಖ್ಯಮಂತ್ರಿಗಳ ನಡವಳಿಕೆ ಅವರ ಸ್ಥಾನಕ್ಕೆ ಅಪಮಾನ ಮಾಡುವಂತಿದೆ ಎಂದು ಆಕ್ಷೇಪಿಸಿದರು.

ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಬರುವ ದಿನಗಳಲ್ಲಿ ರಾಜ್ಯದ ಜನರೇ ಅವರಿಗೆ ಉತ್ತರ ನೀಡುತ್ತಾರೆ ಎಂದು ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಜೊತೆ ಸಮನ್ವಯಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕರ ಜೊತೆ ಅಧಿವೇಶನಕ್ಕೆ ಮೊದಲು ಚರ್ಚೆ ಮಾಡುವುದಾಗಿ ಅವರು ಈ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ.

ವಸತಿ ಹಂಚಿಕೆಗೆ ಹಣ ಕೊಡಬೇಕೆಂಬ ಕಾಂಗ್ರೆಸ್ಸಿನ ಬಿ.ಆರ್.ಪಾಟೀಲ್ ಅವರ ಆರೋಪ ಕುರಿತ ಧ್ವನಿಸುರುಳಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಹೈಕಮಾಂಡಿನ ಎಟಿಎಂ ಆಗಿ ಸರಕಾರವನ್ನು ಪರಿವರ್ತನೆಗೊಳಿಸಿದೆ. ಹಿಂದೆ ಬಿಜೆಪಿಯ ಸರಕಾರದ ವಿರುದ್ಧ ಶೇ 40 ರ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರು. ಇವತ್ತು ಜನಸಾಮಾನ್ಯರು, ಉದ್ಯಮಿಗಳು ಸೇರಿ ಯಾರನ್ನೇ ಕೇಳಿದರೂ ಶೇ 100 ಭ್ರಷ್ಟಾಚಾರ ನಡೆಯುವ ಬಗ್ಗೆ ಜನಸಾಮಾನ್ಯರೇ ಮಾತನಾಡುತ್ತಿದ್ದಾರೆ. ಈ ರೀತಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋದ ಬಗ್ಗೆ ಸ್ವತಃ ಆಡಳಿತ ಪಕ್ಷದ ಶಾಸಕರೇ ಬಹಿರಂಗ ಪಡಿಸಿದ್ದಾರೆ. ಯಾವುದೇ ಇಲಾಖೆಗೆ ಹೋದರೂ ಲಂಚ ಇಲ್ಲದೇ ಕೆಲಸಗಳು ಆಗುತ್ತಿಲ್ಲ ಎಂದಿದ್ದಾರೆ.