Uncategorized

ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ ಕುರಿತು ಸರ್ವ ಪಕ್ಷಗಳ ಸಭೆ

ದೆಹಲಿ:- ಆಪರೇಷನ್ ಸಿಂಧೂರ ಕುರಿತು ಚರ್ಚೆ ನಡೆಸಲು ಕೇಂದ್ರ ಸರ್ಕಾರವು ಸರ್ವ ಪಕ್ಷಗಳ ಸಭೆ ನಡೆಸಿದೆ, ಈ ಸಭೆಯಲ್ಲಿ ದೇಶದ ಬಹುತೇಕ ರಾಜಕೀಯ ಪಕ್ಷಗಳ ನಾಯಕರು ಭಾಗಹಿಸಿದ್ದಾರೆ. ಕಾಂಗ್ರೆಸ್‌ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಸಭೆಯಲ್ಲಿ ಪಾಲ್ಗೊಂಡು ಆಪರೇಷನ್‌ ಸಿಂಧೂರ ಕುರಿತು ಮಾಹಿತಿ ಪಡೆದಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ವ್ಯವಹಾರಗಳ ಸಚಿವ ಸಚಿವ ಎಸ್ ಜೈಶಂಕರ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಹಣಕಾಶ ನಿರ್ಮಲಾ ಸೀತಾರಾಮನ್ ಭಾಗವಹಿಸಿದ್ದಾರೆ.

ಕಾಂಗ್ರೆಸ್‌ನ ಪರವಾಗಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದರೆ, ತೃಣಮೂಲ ಕಾಂಗ್ರೆಸ್‌ನ ಸಂದೀಪ್ ಬಂಡೋಪಾಧ್ಯಾಯ ಮತ್ತು ಡಿಎಂಕೆಯ ಟಿಆರ್ ಬಾಲು ಪಾಲ್ಗೊಂಡಿದ್ದಾರೆ. ಇನ್ನುಳಿದ ಪ್ರಮುಖ ಪ್ರತಿಪಕ್ಷ ಮುಖಂಡರು ಸಭೆಯಲ್ಲಿ ಹಾಜರಿದ್ದರು. ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಶಿವಸೇನಾದ (ಯುಬಿಟಿ) ಸಂಜಯ್ ರಾವತ್‌, ಎನ್‌ಸಿಪಿ (ಎಸ್‌ಪಿ) ಸುಪ್ರಿಯಾ ಸುಳೆ, ಬಿಜು ಜನತಾ ದಳದ ಸಸ್ವಿತ್ ಪಾತ್ರಾ ಮತ್ತು ಸಿಪಿಐ(ಎಂ)ನ ಜಾನ್ ಬ್ರಿಟಾಸ್ ಭಾಗಹಿಸಿದ್ದರು.

ಏಪ್ರಿಲ್‌ 22ರಂದು ಕಾಶ್ಮೀರದ ಪೆಹಲ್‌ಗಾಮದಲ್ಲಿ ಉಗ್ರರು ಭಾರತೀಯ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 25 ಭಾರತೀಯರು ಮೃತಪಟ್ಟಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಬುಧವಾರ ಬೆಳಿಗ್ಗೆ ಆಪರೇಷನ್‌ ಸಿಂಧೂರವನ್ನು ಕೈಗೊಂಡಿದೆ. ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದ ಒಂಬತ್ತು ಜಾಗಗಳಲ್ಲಿ ಭಾರತೀಯ ಸೇನೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಒಟ್ಟು 70 ರಿಂದ 100 ಉಗ್ರರು ಹತರಾಗಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

ದಾಳಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನವು ಗಡಿಯಲ್ಲಿ ಗುಂಡು ಹಾರಿಸಿದೆ. ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಪಾಕಿಸ್ತಾನ ಸೇನೆಯು ಮಾರ್ಟರ್ ಶೆಲ್ಲಿಂಗ್ ಮಾಡಿದೆ. ಈ ಘಟನೆಯಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಕನಿಷ್ಠ 12 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು 51 ಜನರು ಗಾಯಗೊಂಡಿದ್ದಾರೆ. ಪೂಂಚ್ ಸೆಕ್ಟರ್‌ನಲ್ಲಿ ನಡೆದ ಅಪ್ರಚೋದಿತ ಶೆಲ್ಲಿಂಗ್‌ನಲ್ಲಿ ಒಬ್ಬ ಭಾರತೀಯ ಸೈನಿಕ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಗಳ ಹಿನ್ನೆಲೆಯಲ್ಲಿ ಭಾರತದಾದ್ಯಂತ ಕನಿಷ್ಠ 21 ವಿಮಾನ ನಿಲ್ದಾಣಗಳನ್ನು ಮೇ10ರ ವರೆಗೆ ಮುಚ್ಚಲಾಗಿದೆ. ಈ ವಿಮಾನ ನಿಲ್ದಾಣಗಳು ಬಹುತೇಕ ಉತ್ತರ ಮತ್ತು ವಾಯುವ್ಯ ರಾಜ್ಯಗಳಲ್ಲಿವೆ. ದೇಶದ ಪ್ರಮುಖ ನಗರಗಳಲ್ಲಿ ಭಾರೀ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ವಿರೋಧ ಪಕ್ಷಗಳ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.