ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಕೋಟೆ ಶ್ರೀ ಮಾರಿಕಾಂಭ ಜಾತ್ರೆಗೆ ಮಂಗಳವಾರದ ಇಂದು ಅಧಿಕೃತ ಚಾಲನೆ ದೊರೆಯಿತು.
ಗ್ರಾಮ ದೇವತೆಗಳಾದ ಮಡಬೂರು ದಾನಿವಾಸ ದುರ್ಗಾಂಬ, ಹಳೆಪೇಟೆಯ ಗುತ್ಯಮ್ಮ ಹಾಗೂ ಮೇದರ ಬೀದಿಯ ಅಂತರಘಟ್ಟಮ್ಮ ದೇವರುಗಳು, ಶ್ರೀ ಕೋಟೆ ಮಾರಿಕಾಂಭ ದೇವಾಲಯದಿಂದ ಮಾರಿ ಗಣಮಗನ ಉಪಸ್ಥಿತಿಯಲ್ಲಿ ಮೆರವಣಿಗೆ ಮೂಲಕ ಸುಂಕದಕಟ್ಟೆಯ ಮಾರಿ ಮನೆಗೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದರು.
ಸುಂಕದಕಟ್ಟೆಯ ಮಾರಿಕಾಂಭೆಯ ವಿಗ್ರಹದ ಕೆತ್ತನೆ ಮಾಡಿದ ಶಿಲ್ಪಿಗಳು, ಪೂಜಾ ವಿಧಿ ವಿಧಾನಗಳನ್ನು ಪೂರೈಸಿ ಶ್ರೀ ಮಾರಿಕಾಂಭೆಗೆ ದೃಷ್ಟಿಬೊಟ್ಟು (ಜೀವಕಳೆ) ಇಟ್ಟರು. ನಂತರ ದೃಷ್ಟಿ ಬೊಟ್ಟು ಇಡುವ ಸಂದರ್ಭದಲ್ಲಿ 50 ಅಡಿ ದೂರದಲ್ಲಿರುವ ಹುಲ್ಲಿಗೆ ಅಮ್ಮನವರ ದಿವ್ಯದೃಷ್ಟಿಯಿಂದ ತನ್ನಷ್ಟಕ್ಕೆ ತಾನೇ ಬೆಂಕಿ ಹತ್ತಿಕೊಂಡಿತು, ಇದು ಪವಾಡವೇನೋ ಎಂಬಂತೆ ನಡೆಯಿತು. ಹುಲ್ಲಿಗೆ ಬೆಂಕಿ ಬೀಳುವ ಸಂದರ್ಭದಲ್ಲಿ ಭಕ್ತರ ಭಕ್ತಿಯ ಹರ್ಷೋದ್ಗಾರಗಳು ಮುಗಿಲು ಮುಟ್ಟಿದವು. ಇವೆಲ್ಲವೂ ಗ್ರಾಮ ದೇವರುಗಳ ಸಾನಿಧ್ಯದಲ್ಲಿಯೇ ನಡೆದವು. ನಂತರ ಅಲ್ಲಿಂದ ಮೆರವಣಿಗೆ ಮೂಲಕ ಅಗ್ರಹಾರದ ಉಮಾಮಹೇಶ್ವರಿ ದೇವಾಲಯ ಹಿಂದೆ ಇರುವ ಮಾರಿ ಗದ್ದುಗೆಯ ಬಳಿ ಅಮ್ಮನವರನ್ನು ಪ್ರತಿಷ್ಠಾಪಿಸಿ, ಪ್ರಾಣ ಪ್ರತಿಷ್ಠಾಪನೆ ಮಾಡಲಾಯಿತು.
ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಅಗ್ರಹಾರದ ಬ್ರಾಹ್ಮಣ ಮಹಾಸಭಾ ಹಾಗೂ ಪುರೋಹಿತ ವರ್ಗ ಭಾಗವಹಿಸಿತ್ತು. ನಂತರ ಬ್ರಾಹ್ಮಣ ಸಮಾಜದಿಂದ ಮಾರಿಕಾಂಬೆಗೆ ಮಡಿಲು ತುಂಬಿಸಲಾಯಿತು. ಆಗಮಿಸಿದ ಭಕ್ತಾದಿಗಳು ಮಾರಿಕಾಂಬೆಗೆ ಸೀರೆ, ಬಳೆ, ಕುಪ್ಪಸ, ಮಡಲಕ್ಕಿ ಅರ್ಪಿಸಿ ಧನ್ಯರಾದರು.
ಮೆರವಣಿಗೆ ಆಕರ್ಷಣೆಯಾಗಿ ಹಲಗೆ ವಾದ್ಯ, ಮಂಗಳವಾದ್ಯ, ಚಿಟ್ಟೆ ಮೇಳಕ್ಕೆ ತಕ್ಕಂತೆ ವಿವಿಧ ಸಂಘಟನೆಗಳ ಮಹಿಳೆಯರು, ಪುರುಷರು, ಮಕ್ಕಳು, ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮಾರಿ ಜಾತ್ರೆ ಊರ ಹಬ್ಬವಾಯಿತು, ಅದೊಂದು ನಾಡ ಹಬ್ಬವಾಗಿತ್ತು.
ದೃಷ್ಟಿಬೊಟ್ಟು ಇಡುವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಶ್ರೀನಿವಾಸ್, ಜಾತ್ರಾ ಸಮಿತಿಯ ಅಧ್ಯಕ್ಷ ಪಿ.ಆರ್ ಸದಾಶಿವ, ಪದಾಧಿಕಾರಿಗಳಾದ ಸುಕುಮಾರ್ ಪಿ.ಆರ್, ವಿಗ್ರಹದಾನಿಗಳಾದ ಕಣಿವೆ ವಿನಯ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕೆ.ವಿ ವಸಂತ್ ಕುಮಾರ್ ಸುಪುತ್ರ ಡಾ.ನಿಶಾಲ್ ವಸಂತ್, ಎಂ ಆರ್ ರವಿಶಂಕರ್, ಕೃಷ್ಣಯ್ಯ ಆಚಾರ್, ಕೆ ಎಂ ಸುಂದರೇಶ್, ಅಭಿನವ ಗಿರಿರಾಜ್, ಮಹೇಶ್ ಶೆಟ್ಟಿಕೊಪ್ಪ ಸೇರಿದಂತೆ ಪಟ್ಟಣ ಪಂಚಾಯತಿ ಸದಸ್ಯರು, ವಿವಿಧ ಸಮಾಜದ ಮುಖಂಡರು, ದೇವಾಲಯ ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.