ಬೆಂಗಳೂರು

ಕ್ರಿಮಿನಲ್‌ಗಳನ್ನು‌ ಹುತಾತ್ಮರನ್ನಾಗಿ‌ ಮಾಡುತ್ತಾರೆ ಬಿಜೆಪಿಯವರು.- ದಿನೇಶ್ ಗುಂಡೂರಾವ್

ಬೆಂಗಳೂರು:- ಇತ್ತೀಚೆಗೆ ಹತ್ಯೆಯಾದ ಸುಹಾಶ್ ಶೆಟ್ಟಿ ವಿರುದ್ದ ರೌಡಿ ಶೀಟರ್ ತೆರೆಯಲು ಅಂದು ಪೊಲೀಸ್ ಇಲಾಖೆ ನೀಡಿದ್ದ ಆದೇಶದ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ದಿನೇಶ್ ಗುಂಡೂರಾವ್ ಹಂಚಿಕೊಂಡಿದ್ದಾರೆ.

ಸುಹಾಸ್ ಶೆಟ್ಟಿ ವಿರುದ್ಧ ರೌಡಿ ಶೀಟರ್ ಓಪನ್ ಆಗಿದ್ದು 2020 ರಲ್ಲಿ, ಅ ಸಂದರ್ಭದಲ್ಲಿ ಅಧಿಕಾರದಲ್ಲಿದ್ದದ್ದು ಅಂದು ಬಿಜೆಪಿ ಸರ್ಕಾರವೇ. ಗೃಹ ಸಚಿವರಾಗಿದ್ದ ಪುಣ್ಯಾತ್ಮ ಬಸವರಾಜ ಬೊಮ್ಮಾಯಿ ಇಂದು ಸುಹಾಸ್‌ನನ್ನು‌ ಮಹಾತ್ಮ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಆಗ ಯಾಕೆ ಸುಹಾಸ್‌ನನ್ನು ರೌಡಿ ಪಟ್ಟಿಗೆ ಸೇರಿಸಿದ್ದರು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಮುಂದುವರಿದು ಕರಾವಳಿಯನ್ನು ಕೋಮು‌ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರೇ ಕ್ರಿಮಿನಲ್‌ಗಳ ನಿಜವಾದ ಸೃಷ್ಟಿಕರ್ತರು. ಇವರು‌ ಅಧಿಕಾರದಲ್ಲಿದ್ದಾಗ ಕ್ರಿಮಿನಲ್‌ಗಳನ್ನು ಸೃಷ್ಟಿಸುತ್ತಾರೆ. ಅವರ ಮೇಲೆ ರೌಡಿ ಶೀಟರ್ ತೆರೆಯುತ್ತಾರೆ. ಹೆಣ ಬಿದ್ದ ಕೂಡಲೆ ಅದೇ ಕ್ರಿಮಿನಲ್‌ಗಳನ್ನು‌ ಮಹಾತ್ಮರಂತೆ ಬಿಂಬಿಸಿ ಹುತಾತ್ಮರನ್ನಾಗಿ‌ ಮಾಡುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ದೂರಿದ್ದಾರೆ.

ಸುಹಾಸ್ ಹತ್ಯೆ ನಂತರ ಕೂಗುಮಾರಿಗಳಂತೆ ಅರಚುತ್ತಿರುವ ಬಿಜೆಪಿ, ಕರ್ನಾಟಕ ನಾಯಕರ‌ ಯಾರ ಮಕ್ಕಳಾದರೂ ಧರ್ಮದ ಅಮಲಿನಲ್ಲಿ ಬೀದಿ‌ ಕಾಳಗ ಮಾಡುತ್ತಿದ್ದಾರೆಯೆ.? ಅಥವಾ ಧರ್ಮಕ್ಕಾಗಿ ಬಡಿದಾಡುತ್ತಿದ್ದಾರೆಯೆ.? ಬಿಜೆಪಿ ನಾಯಕರ‌ ಧರ್ಮಾಂಧತೆಗೆ‌ ಬೀದಿ ಹೆಣವಾಗುತ್ತಿರುವುದು ಬಡವರ ಮಕ್ಕಳು. ಇದು ಸತ್ಯವಲ್ಲವೇ ಎಂದು ಅವರು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ಬಿಜೆಪಿಯವರ ‌ಕೆಟ್ಟ ರಾಜಕೀಯಕ್ಕೆ ಕರಾವಳಿಯಲ್ಲಿ ಎಷ್ಟೋ ಜನರ‌ ಬಲಿಯಾಗಿದೆ. ಎಷ್ಟೋ ಮನೆಗಳ‌ ದೀಪ ಆರಿ ಹೋಗಿದೆ. ಇಷ್ಟಾದರೂ ಇವರ ರಕ್ತದಾಹ ನಿಂತಿಲ್ಲ. ಕರಾವಳಿಯಲ್ಲಿ ಇನ್ನಷ್ಟು ಹೆಣ ಬೀಳಬೇಕು ಎನ್ನುವ ಉದ್ದೇಶದಿಂದ ‌ದುಷ್ಟ ರಾಜಕಾರಣ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನ‌ ಪ್ರಜ್ಞಾವಂತಿಕೆಯ ಜೊತೆಗೆ ಸೂಕ್ಷ್ಮತೆಯನ್ನು ಅರಿತುಕೊಂಡವರು. ಇನ್ನಾದರೂ ಕರಾವಳಿಯ ಜನ ಬಿಜೆಪಿಯ ಹುನ್ನಾರ ಅರಿಯಬೇಕಿದೆ. ಇಲ್ಲದಿದ್ದರೆ‌ ಬಿಜೆಪಿಯವರ‌ ಕೆಟ್ಟ ರಾಜಕಾರಣಕ್ಕೆ ಜಿಲ್ಲೆಯ‌ ನೆಮ್ಮದಿಯೇ ಹಾಳಾಗಲಿದೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ. ಇದೀಗ ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ವೈರಲ್ ಆಗುತ್ತಿದೆ.

ಸರ್ವ ಜನಾಂಗದ ಶಾಂತಿಯ ತೋಟ ನಿರ್ಮಿಸುತ್ತೇವೆ ಎಂದು ಬಣ್ಣದ ಮಾತನಾಡಿ ಅಧಿಕಾರ ಹಿಡಿದ ಕಾಂಗ್ರೆಸ್‌ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆಯೆಂಬುದೇ ಇಲ್ಲವಾಗಿದೆ ಎಂದು ಕರ್ನಾಟಕ ಬಿಜೆಪಿಯು ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿಯು, ಹತ್ಯೆಗೀಡಾದ ಹಿಂದೂ ಸಹೋದರ ಸುಹಾಸ್‌ ವಿರುದ್ಧ ತಿಂಗಳ ಮೊದಲೇ ಪೋಸ್ಟ್‌ ಹಾಕಿ ಕೊಲೆ ಬೆದರಿಕೆ ಹಾಕಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ಮತ್ತಿಬ್ಬರು ಹಿಂದೂ ಮುಖಂಡರಿಗೆ ಕೊಲೆ ಬೆದರಿಕೆ ಬಂದಿದೆ. ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದ ಹಿಂದೂಗಳಿಗೆ ಯಾವ ರಕ್ಷಣೆಯೂ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದಿದೆ.

ಇಷ್ಟಾದರೂ ಘನತೆವೆತ್ತ ಗೃಹಮಂತ್ರಿಗಳು, ಸಭಾಧ್ಯಕ್ಷರು ಮಾತ್ರ ಹಿಂದೂಗಳಿಗೆ ರೌಡಿ ಪಟ್ಟ ಕಟ್ಟುತ್ತಾ, ಕೊಲೆ ಆರೋಪಿಗಳು ಮತ್ತವರ ಕುಟುಂಬದವರನ್ನು ರಕ್ಷಿಸಲು ಎತ್ನಿಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಈ ಕೂಡಲೇ ಈ ಬೆದರಿಕೆ ಹಾಕಿದವರ ಹೆಡೆಮುರಿ ಕಟ್ಟಬೇಕಿದೆ. ಇಲ್ಲದಿದ್ದರೆ ಅಧಿಕಾರದಿಂದ ನೀವು ಗಂಟುಮೂಟೆ ಕಟ್ಟುವ ದಿನ ದೂರವಿಲ್ಲ ಎಂದೂ ಹೇಳಿದೆ.