ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತಕ್ಕೆ ಗುಪ್ತಚರ ವಿಭಾಗದ ವೈಫಲ್ಯವೇ ಪ್ರಮುಖ ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜುಗೆ ನೀಡಲಾಗಿದ್ದ ಹುದ್ದೆಯನ್ನು ಸಹ ಹಿಂಪಡೆಯಲಾಗಿದೆ.
ಕಳೆದ ಬುಧವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್ಸಿಬಿ ಆಟಗಾರರಿಗೆ ಸನ್ಮಾನ ಮಾಡಬೇಕೆಂಬ ಸಲಹೆ ಕೊಟ್ಟಿದ್ದೇ ಗೋವಿಂದರಾಜು ಎಂಬ ಆರೋಪ ಕೇಳಿ ಬಂದಿತ್ತು.
ಸಚಿವ ಸಂಪುಟದಲ್ಲೂ ಗೋವಿಂದರಾಜು ಮೇಲೆ ಸಚಿವರು ಗರಂ ಆಗಿದ್ದು, ಕೇವಲ ಅಧಿಕಾರಿಗಳನ್ನು ಅಮಾನತು ಮಾಡುವ ಮೊದಲು ಗೋವಿಂದರಾಜುವಿಗೆ ನೀಡಿರುವ ಸ್ಥಾನಮಾನವನ್ನು ಹಿಂಪಡೆಯಬೇಕೆಂದು ಒತ್ತಡ ಹಾಕಿದ್ದರು. ಸರ್ಕಾರದ ವಿಷಯದಲ್ಲಿ ಅತಿಯಾಗಿ ಮೂಗು ತೂರಿಸುತ್ತಿದ್ದುದರಿಂದ ಅವರನ್ನು ದೂರವಿರುವಂತೆ ಹಲವು ಬಾರಿ ಸಿಎಂಗೆ ಸಚಿವರು ಮತ್ತು ಶಾಸಕರು ಮನವಿ ಮಾಡಿದ್ದರು. ಇದೀಗ ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ ಪ್ರಕರಣದಲ್ಲಿ ಗೋವಿಂದರಾಜು ತಲೆದಂಡವಾಗಿದೆ.