ವ್ಯಾಟಿಕನ್ ಸಿಟಿ:- ಕಡು ಸಂಪ್ರದಾಯಸ್ಥರ ತೀವ್ರ ವಿರೋಧ, ಟೀಕೆಗಳ ಮಧ್ಯೆಯೂ ಹಲವು ಸುಧಾರಣಾವಾದಿ ಕ್ರಾಂತಿಕಾರಕ ಕ್ರಮಗಳನ್ನು ತೆಗೆದುಕೊಂಡಿದ್ದ, “ಜನರ ಪೋಪ್” ಎಂದೇ ಕರೆಸಿಕೊಳ್ಳುತ್ತಿದ್ದ ಪೋಪ್ ಫ್ರಾನ್ಸಿಸ್ ಅವರಿಗೆ ಇಲ್ಲಿನ ಸೇಂಟ್ ಪೀಟರ್ಸ್ ಸ್ಕ್ವೇರ್‌ನಲ್ಲಿ ಶನಿವಾರ ಅಂತಿಮ ವಿದಾಯ ಹೇಳಲಾಯಿತು.
ಪೋಪ್ ಅವರ ಅಂತ್ಯ ಸಂಸ್ಕಾರದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಜಗತ್ತಿನ ವಿವಿಧ ಭಾಗಗಳ ಸುಮಾರು 4 ಲಕ್ಷ ಜನರು ಸೇರಿದ್ದರು. ಇವರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಅಂತಿಮ ವಿಧಿ ವಿಧಾನಗಳನ್ನು ಹತ್ತಿರದಿಂದ ನೋಡಬೇಕು ಎಂದು ಬಯಸಿ ವಿವಿಧ ದೇಶಗಳಿಂದ ಪುಟ್ಟ ಮಕ್ಕಳೊಂದಿಗೆ ಬಂದಿದ್ದ ಕುಟುಂಬಗಳು ಶುಕ್ರವಾರ ರಾತ್ರಿಯಿಂದಲೇ ಸ್ಕ್ವೇರ್‌ನಲ್ಲಿ ಸೇರಿದ್ದವು. ಸಾರ್ವಜನಿಕರಿಗಾಗಿ ಸಿದ್ಧಪಡಿಸಿದ್ದ ಆಸನಗಳಲ್ಲಿ ಕೆಲವರು ಕುಳಿತುಕೊಂಡಿದ್ದರೆ, ಕೆಲವರು ಅಲ್ಲೇ ಮಲಗಿದ್ದರು. ಮತ್ತೆ ಕೆಲವರು ಕಾರುಗಳಲ್ಲೇ ರಾತ್ರಿ ಕಳೆದು ಬೆಳಗಿನ ಜಾವ ಸೇಂಟ್ ಪೀಟರ್ಸ್ ಸ್ಕ್ವೇರ್‌ಗೆ ಬಂದರು.
ಅಂತಿಮ ವಿದಾಯ ಬಳಿಕ ಪೋಪ್ ಅವರ ಇಚ್ಛೆಯಂತೆಯೇ ಅವರ ಮೃತದೇಹವನ್ನು ರೋಮ್‌ನ ಸೇಂಟ್ ಮೇರಿ ಚರ್ಚ್‌ಗೆ ಕೊಂಡೊಯ್ಯಲಾಯಿತು. ಅಲ್ಲಿಯೇ ಅವರನ್ನು ಮಣ್ಣು ಮಾಡಲಾಯಿತು ಎಂದು ‘ಕ್ಯಾಥೊಲಿಕ್ ನ್ಯೂಸ್ ಸರ್ವೀಸ್ ರೋಮ್’ ಎಂಬ ಚರ್ಚ್‌ನ ‘ಎಕ್ಸ್’ ಖಾತೆಯು ಪೋಸ್ಟ್ ಹಂಚಿಕೊಂಡಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ವಿಶ್ವನಾಯಕರು ಸೇರಿದ್ದರಿಂದ ವ್ಯಾಟಿಕನ್ ಸಿಟಿಯ ಸುತ್ತ ಭಾರಿ ಭದ್ರತೆ ನಿಯೋಜಿಸಲಾಗಿತ್ತು. ಸುಮಾರು 2,500 ಪೊಲೀಸರು, 1,500 ಸೈನಿಕರು ಭದ್ರತೆಗೆ ನಿಯೋಜನೆಗೊಂಡಿದ್ದರು. ಉಕ್ರೇನ್ ಪ್ರಧಾನಿ ವೊಲೊಡಿಮಿರ್ ಝೆಲೆನ್‌ಸ್ಕಿ ದಂಪತಿ ಜೊತೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು.