ಹಾವೇರಿ

ಜನಾರ್ದನ ರೆಡ್ಡಿಗೆ ರಾಜಕೀಯ ಭವಿಷ್ಯಕ್ಕೆ ಉಸಿರಾಟ ನೀಡಿದ ತೀರ್ಪು.!

ಹಾವೇರಿ:- ಗಂಗಾವತಿ ಉಪ ಚುನಾವಣೆಯ ಸ್ಪರ್ಧೆಯ ವಿಚಾರವಾಗಿ ಅಭ್ಯರ್ಥಿಗಳು ನಾ ಮುಂದು, ನಾ ಮುಂದು ಎಂದು ಲೆಕ್ಕಾಚಾರ ಹಾಕಿದ್ದೆ ಹಾಕಿದ್ದು, ಆದಾರಿಗ ಎಲ್ಲವೂ ತಲೆಕೆಳಗಾಗಿದೆ.

ಅಕ್ರಮ ಗಣಿಗಾರಿಕೆ ಹಾಗೂ ಗಡಿ ಒತ್ತುವರಿ ಪ್ರಕರಣದಲ್ಲಿ ಏಳು ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಚಿವ ಹಾಗೂ ಗಂಗಾವತಿಯ ಶಾಸಕ ಜಿ.ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ಮೂಲಕ ಜನಾರ್ದನ ರೆಡ್ಡಿ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಹೈದರಾಬಾದ್‌ನ ನಾಮಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಕಳೆದ ಮೇ 30ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಸೇರಿದಂತೆ 6 ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿತ್ತು. ಈ ತೀರ್ಪು 2011ರಲ್ಲಿ ನಡೆದ ಓಬಳಾಪುರಂ ಮೈನಿಂಗ್ ಕಂಪನಿ (OMC) ಮೂಲಕ ಗಡಿ ಮೀರಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಡಿಸಲಾಗಿತ್ತು. ಒಟ್ಟು 850 ಕೋಟಿ ರೂ. ಮೌಲ್ಯದ ಗಣಿ ಸಂಪತ್ತು ಲೂಟಿ ಆರೋಪದಡಿ ಜನಾರ್ದನ ರೆಡ್ಡಿ 2011ರ ಸೆಪ್ಟೆಂಬರ್ 5ರಂದು ಸಿಬಿಐ ವಶಕ್ಕೆ ಸೇರುವ ಮೂಲಕ 3 ವರ್ಷ 9 ತಿಂಗಳು ಜೈಲುವಾಸ ಅನುಭವಿಸಿದ್ದರು.

ಜನಪ್ರತಿನಿಧಿ ಕಾಯಿದೆಯಂತೆ ಅವರು ತಮ್ಮ ಶಾಸಕ ಸ್ಥಾನದಿಂದ ಅನರ್ಹರಾಗಿದ್ದರು. ಇದೀಗ ಅವರ ಶಿಕ್ಷೆಗೆ ತಡೆಯಾಜ್ಞೆ ನೀಡಲಾಗಿರುವುದರಿಂದ ಶಾಸಕ ಸ್ಥಾನ ಅವರ ಬಳಿಯೇ ಉಳಿಯಲಿದೆ ಎನ್ನಲಾಗುತ್ತಿದೆ.

ಸ್ಥಾನ ತೆರವಾಗಲಿದೆ ಎಂದು ತಿಳಿಯುತ್ತಿದ್ದಂತೆ ಮೊದಲು ಈ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯದಲ್ಲಿಯೇ ಅಭ್ಯರ್ಥಿ ಹುಡುಕುವ ಪ್ರಯತ್ನ ಆರಂಭವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಯಾಗಿರುವ ಇಕ್ಬಾಲ್‌ ಅನ್ಸಾರಿ ಮುಸ್ಲಿಂ ಸಮುದಾಯದವರಾಗಿದ್ದರೂ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವುದು ಅಲ್ಲದೇ ಕಳೆದ ಎರಡು ಚುನಾವಣೆಯಲ್ಲಿ ಸೋತಿರುವುದರಿಂದ ಈ ಬಾರಿ ಗೆಲ್ಲುವ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್‌ ಇತ್ತು.

ಕಾಂಗ್ರೆಸ್‌ ಪಕ್ಷದಲ್ಲಿ ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯ ಪೈಕಿ ಮುಸ್ಲಿಂ ಸಮುದಾಯಕ್ಕೆ ಮೀಸಲಾಗಿರುವ ಕ್ಷೇತ್ರವೆಂದರೆ ಅದು ಗಂಗಾವತಿ ವಿಧಾನಸಭಾ ಕ್ಷೇತ್ರ. ಹನುಮ ಉದಯಿಸಿದ ನಾಡು ಅಂಜನಾದ್ರಿ ಇದೇ ಕ್ಷೇತ್ರದಲ್ಲಿದ್ದರೂ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಿನ ಮಟ್ಟದಲ್ಲಿರುವುದರಿಂದ ಈ ಸಮುದಾಯಕ್ಕೆ ಕಾಂಗ್ರೆಸ್‌ ಮಣೆ ಹಾಕುತ್ತಾ ಬರುತ್ತಿದೆ. ಅದರಂತೆ ಉಪ ಚುನಾವಣೆ ನಡೆದರೆ ಮುಸ್ಲಿಂ ಸಮುದಾಯದ ಅಭ್ಯರ್ಥಿಗೆ ಮೊದಲು ಮಣೆ ಹಾಕುವ ಸಾಧ್ಯತೆಗಳಿತ್ತು.

ಇಕ್ಬಾಲ್‌ ಅನ್ಸಾರಿ ಮುಸ್ಲಿಂ ಸಮುದಾಯದವರಾಗಿದ್ದರೂ ಈ ಬಾರಿ ಅಂದುಕೊಂಡಂತೆ ಟಿಕೆಟ್‌ ಸಿಗುವ ಲಕ್ಷಣಗಳಿಲ್ಲ, ಪಕ್ಷದೊಳಗಿನ ಅವರ ವಿರೋಧಿ ಗುಂಪು ಶತಾಯಗತಾಯ ಅನ್ಸಾರಿಗೆ ಟಿಕೆಟ್‌ ತಪ್ಪಿಸಬೇಕೆಂಬ ಲೆಕ್ಕಾಚಾರದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ.

ಇದಕ್ಕೆ ಅನುಕೂಲಕರವೆಂಬಂತೆ ಜನರಿಂದ ಅಂತರ ಕಾಯ್ದು ಕೊಂಡಿರುವ ಅನ್ಸಾರಿ ಅವರ ನಡವಳಿಕೆಯಿಂದ ಅವರ ರಾಜಕೀಯ ಭವಿಷ್ಯ ಡೋಲಾಯಮಾನವಾಗುವುದರಲ್ಲಿ ಎರಡು ಮಾತಿಲ್ಲ ಎಂಬ ಲೆಕ್ಕಾಚಾರಗಳಿವೆ. ಇಷ್ಟಾದರೂ ಕಳೆದ ಎರಡು ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋಲು ಅನುಭವಿಸಿರುವ ಇಕ್ಬಾಲ್‌ ಅನ್ಸಾರಿ ಅವರು ವಿರೋಧಿ ಗುಂಪು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಜನರ ಕಷ್ಟ-ಕಾರ್ಪಣ್ಯಗಳಿಗೆ ಹೆಗಲು ಕೊಟ್ಟರೆ ಮತ್ತೊಮ್ಮೆ ರಾಜಕೀಯದಲ್ಲಿ ಮಹತ್ತರ ದಾಪುಗಾಲಿಡಲಿದ್ದಾರೆ ಎಂಬ ವ್ಯಾಖ್ಯಾನಗಳು ಅವರ ಅಭಿಮಾನಿಗಳಿಂದ ಕೇಳಿ ಬಂದಿದೆ.

ಇನ್ನೂ ಮುಂದೆ ನೋಡಿದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಮಾಜಿ ಸಂಸದ ಸಂಗಣ್ಣ ಕರಡಿ ಅವರಿಗೆ ಗಂಗಾವತಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಕೊಡಿಸಬೇಕು ಎನ್ನುವ ಚಿಂತನೆಯೊಂದು ಕಾಂಗ್ರೆಸ್‌ ಪಕ್ಷದ ಕೆಲ ಮುಖಂಡರಲ್ಲಿತ್ತು. ಅದಕ್ಕೆ ಪೂರಕವಾಗಿ ಅವಕಾಶ ಕೊಟ್ಟರೆ ಸಂಗಣ್ಣ ಕರಡಿ ಅವರು ಸ್ಪರ್ಧಿಸಲು ಅಣಿಯಾಗಿದ್ದಾರೆ ಎಂಬ ಮಾತು ಕೂಡ ತೇಲಾಡುವ ಸುದ್ಧಿ ಕೇಳಿತ್ತಾದರೂ ಒಂದು ಕಾಲದಲ್ಲಿ ಇಕ್ಬಾಲ್‌ ಅನ್ಸಾರಿ ಬಣದಲ್ಲಿಯೇ ಇದ್ದ ಶ್ಯಾಮಿದ ಮನಿಯಾರ್‌ ಹಾಗೂ ಹನುಮಂತ ಅರಸೀನಕೆರೆ ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದರು.

ಮುಂದುವರೆದಂತೆ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ರಾಘವೇಂದ್ರ ಹಿಟ್ನಾಳ್‌ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ರಾಜಶೇಖರ ಹಿಟ್ನಾಳ್‌ ಅವರ ಕುಟುಂಬ ಗಂಗಾವತಿ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿತ್ತು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಜಶೇಖರ ಹಿಟ್ನಾಳ್‌ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಜೋರಾಗಿ ಓಡಾಟ ನಡೆಸಿರುವುದು ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ, ಪರೋಕ್ಷವಾಗಿ ಈವರೆಗೆ ಚುನಾವಣೆಯಲ್ಲಿ ಇಕ್ಬಾಲ್‌ ಅನ್ಸಾರಿ ಅವರಿಗೆ ಪೆಟ್ಟು ನೀಡಿರುವ ಆರೋಪ ಹಿಟ್ನಾಳ್‌ ಕುಟುಂಬದ ಮೇಲಿದೆ. ಈ ವಿಚಾರದ ಭಾಗವಾಗಿಯೇ ಖುದ್ದು ಅನ್ಸಾರಿಯವರೇ ಹಲವು ಬಾರಿ ಬಹಿರಂಗವಾಗಿಯೇ ಕಿಡಿಕಾರಿದ್ದರು. ಅಂದುಕೊಂಡಂತೆಯಾದರೆ ಹಿಟ್ನಾಳ್‌ ಕುಟುಂಬದ ಮಾಜಿ ಶಾಸಕ ಬಸವರಾಜ ಹಿಟ್ನಾಳ್‌ ಅವರನ್ನು ಉಪ ಚುನಾವಣೆಯಲ್ಲಿ ಕಣಕ್ಕಿಳಿಸುವ ಚಿಂತನೆಯೂ ಇತ್ತು. ಅನ್ಸಾರಿ ಹೊರತುಪಡಿಸಿ ತಮಗೆ ಬೇಕಾದವರಿಗೆ ಟಿಕೆಟ್‌ ಕೊಡಿಸುವ ಇರಾದೆ ಹಿಟ್ನಾಳ್‌ ಕುಟುಂಬದ್ದು ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರತೊಡಗಿತ್ತು. ಗಂಗಾವತಿ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದರೆ ಅಲ್ಲಿ ಹೈಕಮಾಂಡ್‌ ಕಾಂಗ್ರೆಸ್‌ನಿಂದ ಯಾರನ್ನೇ ನಿಲ್ಲಿಸಿದರೂ ಅವರನ್ನು ಗೆಲ್ಲಿಸಿಕೊಂಡು ಬರಲಿದ್ದೇವೆ ಎಂದು ಸಂಸದ ರಾಜಶೇಖರ ಹಿಟ್ನಾಳ್‌ ಹೇಳಿದ್ದರು. ಗಂಗಾವತಿ ಉಪ ಚುನಾವಣೆಯ ಸ್ಪರ್ಧೆಯ ಬಗ್ಗೆ ಈಗಲೇ ಏನು ಹೇಳುವುದಿಲ್ಲ, 2028ರ ವಿಧಾನಸಭೆ ಚುನಾವಣೆಗೆ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯಿದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದ್ದರು.

ಇಂಟರೆಸ್ಟಿಂಗ್ ವಿಚಾರವೆಂದರೆ ಸಿಬಿಐ ಕೋರ್ಟ್‌ನ ಆದೇಶದ ವಿರುದ್ಧ ಜನಾರ್ದನ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ತೆಲಂಗಾಣ ಹೈಕೋರ್ಟ್ ಇದೀಗ ಸಿಬಿಐ ಕೋರ್ಟ್ ತೀರ್ಪಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಈ ತೀರ್ಪು ಅವರ ರಾಜಕೀಯ ಭವಿಷ್ಯಕ್ಕೆ ಉಸಿರಾಟ ನೀಡಿದ್ದು, ಶಾಸಕರ ಸ್ಥಾನ ಉಳಿಸಿಕೊಳ್ಳುವಲ್ಲಿ ಸಹಾಯಕವಾಗಿದೆ. ಜನಪ್ರತಿನಿಧಿಗಳ ಕಾಯಿದೆ ಪ್ರಕಾರ, ಯಾವುದೇ ಶಾಸಕ ಅಥವಾ ಸಂಸದ ಎರಡು ವರ್ಷಕ್ಕೂ ಮೇಲ್ಪಟ್ಟ ಅವಧಿಗೆ ಜೈಲು ಶಿಕ್ಷೆಗೆ ಒಳಗಾದರೆ ಅವರ ಶಾಸಕ ಸ್ಥಾನ ತಕ್ಷಣದಿಂದಲೇ ರದ್ದಾಗುತ್ತದೆ. ಆದರೆ, ಎರಡು ತಿಂಗಳ ಒಳಗೆ ಆತ ಮೇಲ್ಮನವಿ ಮೂಲಕ ಈ ಶಿಕ್ಷೆಯನ್ನು ರದ್ದುಗೊಳಿಸಿಕೊಂಡರೆ ಅಥವಾ ತಡೆಯಾಜ್ಞೆ ತಂದರೆ, ಆಗ ಆ ಸ್ಥಾನ ಅವರಲ್ಲಿಯೇ ಉಳಿಯುತ್ತದೆ. ಅದರ ಪ್ರಕಾರ ಇದೀಗ ಜನಾರ್ದನ ರೆಡ್ಡಿ ಮತ್ತೆ ತಮ್ಮ ಗಂಗಾವತಿ ಶಾಸಕ ಸ್ಥಾನಕ್ಕೆ ಹಿಂದಿರುಗಿದ್ದಾರೆ.

ಸಿಬಿಐ ವಿಚಾರಣೆ ಬಳಿಕ ರಾಜಕೀಯದಿಂದ ದೂರವಿದ್ದ ಜನಾರ್ದನ ರೆಡ್ಡಿ, 2023ರಲ್ಲಿ ಹೊಸ ರಾಜಕೀಯ ಪಕ್ಷ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸ್ಥಾಪಿಸಿ, ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದರು. ಆ ಮೂಲಕ ರಾಜ್ಯ ರಾಜಕಾರಣಕ್ಕೆ ಸಕ್ರಿಯವಾಗಿ ಹಿಂದಿರುಗಿದ್ದರು. ನಂತರ ಮಾತೃ ಪಕ್ಷವಾದ ಬಿಜೆಪಿಯೊಂದಿಗೆ ಕೆಆರ್‌ಪಿಪಿಯನ್ನು ವಿಲೀನ ಮಾಡಿದ್ದರು.

ಈ ತಾತ್ಕಾಲಿಕ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಮತ್ತೊಮ್ಮೆ ರಾಜಕೀಯ ವೇದಿಕೆಯಲ್ಲಿ ಬಲವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಆದರೆ, ಈ ತೀರ್ಪು ತಾತ್ಕಾಲಿಕ ತಡೆಯಾಜ್ಞೆಯಾಗಿದ್ದು, ಮುಂದಿನ ದಿನಗಳಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪು ನಿರ್ಣಾಯಕವಾಗಲಿದೆ.

ಒಟ್ಟಾರೆಯಾಗಿ ಉಪ ಚುನಾವಣೆಯ ಕನಸಿನಲ್ಲಿದ್ದ ಕಾಂಗ್ರೆಸ್ ಪಕ್ಷದ ನಾಯಕರಿಗೆ ಗಂಗಾವತಿ ಕ್ಷೇತ್ರ ಕಬ್ಬಿಣದ ಕಡಲೆಕಾಯಿಯಾಗಿದೆ.