ನವದೆಹಲಿ:- ಹೆಚ್ ಡಿ ಕುಮಾರಸ್ವಾಮಿ ಅವರು, ದಲಿತ, ಹಿಂದುಳಿದ ವರ್ಗಗದ ನಾಯಕರನ್ನು ಗುರಿಯಾಗಿಸಿಕೊಂಡು ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಸಚಿವ ಪರಮೇಶ್ವರ್ ಅವರು ಇಂಥ ಸಂಕಷ್ಟಕ್ಕೆ ಒಳಗಾಗಲು ಕಾಂಗ್ರೆಸ್ ಪಕ್ಷದ ಆ ಪ್ರಭಾವೀ ನಾಯಕನೇ ಕಾರಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ದೆಹಲಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ ನೇರ ಆರೋಪ ಮಾಡಿದರು.
ಅವರು ಮಾತು ಮುಂದುವರೆಸಿ ಸಚಿವ ರಾಜಣ್ಣ ವಿಧಾನಸಭೆಯಲ್ಲಿ ಹೇಳಿದರಲ್ಲ, ರಾಜ್ಯದಲ್ಲಿ ಸಿಡಿ, ಪೆನ್ ಡ್ರೈವ್ ಫ್ಯಾಕ್ಟರಿ ಇಟ್ಟುಕೊಂಡಿರುವ ಪ್ರಭಾವೀ ನಾಯಕನ ಬಗ್ಗೆ ನೇರವಾಗಿ ಹೇಳಿದ್ದರು ಅವರು. ಅವರು ಹೇಳಿದ್ದ ನಾಯಕನೇ ಇವತ್ತು ಪರಮೇಶ್ವರ್ ಅವರನ್ನು ಮುಗಿಸಲು ಹೊರಟಿದ್ದಾನೆ. ಪರಮೇಶ್ವರ್ ಅವರು ದಲಿತ ನಾಯಕರ ಸಭೆ ಮಾಡಲು ಹೊರಟಿದ್ದು, ದೆಹಲಿ ನಾಯಕರನ್ನು ಭೇಟಿ ಮಾಡಿದ್ದೇ ಅವರ ವಿರುದ್ಧ ಕುತಂತ್ರ ನಡೆಯಲು ಕಾರಣ ಎಂದು ಕೇಂದ್ರ ಸಚಿವರು ದೂರಿದರು.
ರಾಜ್ಯದಲ್ಲಿ ಏನೇನಾಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೇಲಾಗಿ ಕಾಂಗ್ರೆಸ್ ಪಕ್ಷದಲ್ಲಿ ಯಾರು ಯಾರಿಗೆ ಗುನ್ನ ಹೊಡೆಯುತ್ತಿದ್ದಾರೆ ಎನ್ನುವ ಮಾಹಿತಿಯೂ ಎಲ್ಲರಿಗೂ ತಿಳಿದಿದೆ. ದುಬೈನಿಂದ ಸಿಕ್ಕಿಬಿದ್ದಿರುವ ಆ ಮಹಿಳೆ ಚಿನ್ನ ತರುತ್ತಿದ್ದಾಳೆ ಎನ್ನುವ ಮಾಹಿತಿಯನ್ನು ಸೋರಿಕೆ ಮಾಡಿದ್ದೇ ಈ ಪ್ರಭಾವೀ ನಾಯಕ. ಆಕೆ ದುಬೈನಿಂದ ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದಾಳೆ ಎನ್ನುವ ವಿಚಾರ ಈ ಪ್ರಭಾವೀ ನಾಯಕನಿಗೆ ಹೇಗೆ ಗೊತ್ತು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಅವರ ಬಳಿಯೇ ಗುಪ್ತಚರ ವಿಭಾಗ ಇದೆಯಲ್ಲ. ಅವರಿಗೆ ಈ ವಿಷಯ ಗೊತ್ತಿಲ್ಲವೇ? ಆ ಮಹಿಳೆ ವಿಮಾನ ನಿಲ್ದಾಣದ ಮೂಲಕ ಚಿನ್ನ ತರುತ್ತಿರುವ ಮಾಹಿತಿ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷದ ಈ ಪ್ರಭಾವಿ ನಾಯಕ. ಈ ವಿಷಯ ಸಿದ್ದರಾಮಯ್ಯ ಅವರ ಗಮನಕ್ಕೆ ಬಂದಿಲ್ಲವೇ? ಸಚಿವ ಪರಮೇಶ್ವರ್ ಅವರು ದಲಿತರ ಸಮಾವೇಶ ಮಾಡಲು ಹೊರಟರು. ತಾವು ಕೂಡ ಸಿಎಂ ಪದವಿಯ ಆಕಾಂಕ್ಷಿ ಎಂದು ಹೇಳಿದರು. ತಮ್ಮ ದಾರಿಗೆ ಅಡ್ಡ ಬರುತ್ತಾರೆ ಎಂದು ಕಾಂಗ್ರೆಸ್ ಪ್ರಭಾವೀ ನಾಯಕನೇ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಕುತಂತ್ರ ಹೂಡಿದರು. ಇಷ್ಟೆಲ್ಲಾ ಗಂಭೀರ ವಿಚಾರಗಳು ಸಿಎಂಗೆ ಗೊತ್ತಿಲವೆಂದರೆ ಹೇಗೆ? ಸಿದ್ದರಾಮಯ್ಯ ಅವರನ್ನು ಇಳಿಸಿ ನಾನು ಸಿಎಂ ಆಗಬೇಕು ಎಂದು ಕುರ್ಚಿಯ ಮೇಲೆ ಟವೆಲ್ ಹಾಕಿಕೊಂಡು ಕೂತಿರುವವರೆ ಚಿನ್ನದ ರಹಸ್ಯ ಬಹಿರಂಗ ಮಾಡಿದ್ದಾರೆ ಎಂಬ ಸ್ಫೋಟಕ ಅಂಶಗಳನ್ನು ವಿಷಯವನ್ನು ಕುಮಾರಸ್ವಾಮಿ ಅವರು ಬಹಿರಂಗಪಡಿಸಿದರು.
ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಇಷ್ಟೆಲ್ಲಾ ರಾಜಕೀಯ ಮೇಲಾಟ ನಡೆಯುತ್ತಿದ್ದರೂ ಕೇಂದ್ರ ಸರ್ಕಾರದ ಕಡೆ ಬೆರಳು ತೋರಿಸುವ ವ್ಯರ್ಥ ಪ್ರಯತ್ನ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಭಾವೀ ನಾಯಕನಿಂದಲೇ ಇದೆಲ್ಲಾ ನಡೆದಿದೆ. ಅದೆಷ್ಟೋ ಎಸ್ಐಟಿ, ಕಮಿಟಿ, ಸಮಿತಿ ಎಲ್ಲಾ ಮಾಡಿದ್ದಿರಲ್ಲ? ಅವೆಲ್ಲವೂ ಏನಾದವು? ಬಾಯಿ ಬಿಟ್ಟರೆ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಾರೆ. ಆದರೆ, ನುಡಿದಂತೆ ನಡೆಯಲು ಎಷ್ಟು ತೆರಿಗೆ ಹಾಕಿದ್ದಾರೆ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.