ಬೆಂಗಳೂರು

ತಮ್ಮ ವರ್ಚಸ್ಸನ್ನು ತಾವೇ ಕಳೆದುಕೊಳ್ಳುತ್ತಿರುವ ನಾಯಕರಿವರು

ಬೆಂಗಳೂರು:- ಉಪ ಮುಖ್ಯಮಂತ್ರಿಯಾದ ಡಿ.ಕೆ.ಶಿವಕುಮಾರ್‌ ರವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಲೇ ಇದ್ದು, ಮುಖ್ಯಮಂತ್ರಿ ರೇಸ್‌ನಲ್ಲಿ ಇರುವ ಡಿ.ಕೆ.ಶಿವಕುಮಾರ್‌ ನಡೆಯ ಬಗ್ಗೆ ಪಕ್ಷದಲ್ಲಿಯೇ ಅಸಮಾಧಾನ ಹೊಗೆಯಾಡುತ್ತಿದೆ. ತಮ್ಮ ವರ್ಚಸ್ಸನ್ನು ಅವರೇ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಪಕ್ಷದಲ್ಲಿನ ಬೆಳವಣಿಗೆಗಳೇ ಅದಕ್ಕೆ ಪುಷ್ಠೀಕರಿಸುತ್ತಿವೆ.

ಸರ್ಕಾರ ರಚನೆಯಾದ ಬಳಿಕ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಸುತ್ತಿರುವ ರಾಜಕಾರಣ ಸಕಾರಾತ್ಮಕ ಬೆಳವಣಿಗೆಗಳು ಕಾಣುವ ಬದಲು ನಕಾರಾತ್ಮಕವಾಗಿ ನಡೆಯುತ್ತಿವೆ. ಇದು ರಾಜಕೀಯ ವಲಯದಲ್ಲಿ ಮಾತ್ರವಲ್ಲ ಸಾರ್ವಜನಿಕ ವಲಯದಲ್ಲಿಯೂ ಹಲವು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿವೆ. ಅದರಲ್ಲಿ ಬಹುತೇಕ ಡಿ.ಕೆ.ಶಿವಕುಮಾರ್‌ ನಡೆಯ ಬಗ್ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಸಿಎಂ ಹುದ್ದೆಗಾಗಿ ಮಾಡುತ್ತಿರುವ ರಾಜಕಾರಣ ರಾಜ್ಯ ರಾಜಕೀಯದಲ್ಲಿ ಒಳ್ಳೆಯ ಬೆಳವಣಿಗೆಗಳಲ್ಲ. ಕಾಂಗ್ರೆಸ್‌ನಲ್ಲಿ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳು, ವಲಯಗಳಿಂದಲೂ ಇದೇ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಆರ್‌ಸಿಬಿ ಸಂಭ್ರಮೋತ್ಸವ ವೇಳೆ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ದುರಂತಕ್ಕೆ ಡಿ.ಕೆ.ಶಿವಕುಮಾರ್‌ ಕಾರಣ ಎಂಬಂತೆ ಕಾಂಗ್ರೆಸ್‌ ನಾಯಕರಲ್ಲದೆ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ವಿರೋಧ ಪಕ್ಷ ನಾಯಕರಾದ ಆರ್‌.ಅಶೋಕ್‌, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡಾ ನೇರ ಬೊಟ್ಟು ಮಾಡಿದ್ದಾರೆ.

ಸರ್ಕಾರ ರಚನೆಯಾದಾಗಿನಿಂದಲೂ ಶಿವಕುಮಾರ್‌ ಒಂದಲ್ಲ ಒಂದು ಆರೋಪಗಳನ್ನು ಎದುರಿಸುತ್ತಲೇ ಬರುತ್ತಿದ್ದಾರೆ. ಆರೋಪಗಳು ಸಕಾರಾತ್ಮಕವಾಗಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ, ನಕಾರಾತ್ಮಕ ಆರೋಪಗಳು ಬರುತ್ತಿರುವುದರಿಂದ ಅವರ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡುತ್ತಿದೆ. ಇದು ಮುಂದೆ ಮುಖ್ಯಮಂತ್ರಿ ಸ್ಥಾನಕ್ಕೆ ಏರುವ ಹಾದಿಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಇದರ ಜತೆಗೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಈಗಾಗಲೇ ನಕಾರಾತ್ಮಕ ಸಂದೇಶ ರವಾನೆಯಾಗಿದ್ದು, ಐದಾರು ತಿಂಗಳಿಂದ ಬಾಕಿಯಿದ್ದ ನಾಲ್ಕು ಸ್ಥಾನಗಳ ವಿಧಾನ ಪರಿಷತ್‌ ನಾಮ ನಿರ್ದೇಶನದ ಅಭ್ಯರ್ಥಿಗಳ ಆಯ್ಕೆಯಲ್ಲಿ ಡಿಕೆಶಿ ಅವರನ್ನು ಬದಿಗೊತ್ತುವ ಮೂಲಕ ಸ್ಪಷ್ಟ ಸೂಚನೆಯನ್ನೂ ಹೈಕಮಾಂಡ್‌ ನೀಡಿದೆ ಎಂದು ರಾಜಕೀಯ ವಿಶ್ಲೇಷಕರ ಅಭಿಮತವಾಗಿದೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, 2023ರ ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷವನ್ನು ಸಂಘಟಿತಗೊಳಿಸಿದರು. ಪಕ್ಷವನ್ನು, ನಾಯಕರನ್ನು ಒಗ್ಗೂಡಿಸುವುದರ ಜೊತೆಗೆ ರಾಜಕೀಯ ರಣತಂತ್ರ ರೂಪಿಸಿದರು. ಚುನಾವಣಾ ಪ್ರಚಾರ ಕಾರ್ಯದಲ್ಲಿಯೂ ತಂತ್ರ ಹೆಣೆದಿದ್ದರು. ಕಾಂಗ್ರೆಸ್‌ ಪಕ್ಷವು ಹೆಚ್ಚು ಸ್ಥಾನಗಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸು, ಶ್ರಮದ ಜತೆಗೆ ಡಿ.ಕೆ.ಶಿವಕುಮಾರ್‌ ಅವರ ತಂತ್ರಗಾರಿಕೆಯೂ ಸಹಾಯ ಮಾಡಿತ್ತು. ಡಿ.ಕೆ.ಶಿವಕುಮಾರ್‌ ಮಾಡಿದ ಪಕ್ಷದ ಸಂಘಟನೆಗೆ ಹೈಕಮಾಂಡ್‌ ಸಹ ಮೆಚ್ಚುಗೆ ವ್ಯಕ್ತಪಡಿಸಿತ್ತು. ಆದರೆ, ರಾಜ್ಯದಲ್ಲಿ ಸರ್ಕಾರ ರಚನೆಯಾಗುತ್ತಿದ್ದಂತೆ ಡಿ.ಕೆ.ಶಿವಕುಮಾರ್‌ ವರಸೆಯೇ ಬದಲಾಗುತ್ತಾ ಬಂತು. ಮುಖ್ಯಮಂತ್ರಿ ಆಕಾಂಕ್ಷೆಯಾಗಿದ್ದರೂ, ಅವರನ್ನು ಹೈಕಮಾಂಡ್‌ ಮನವೊಲಿಕೆ ಮಾಡಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಸಿತು. ಅಲ್ಲದೇ, ಸರ್ಕಾರದ ರಚನೆಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿಯನ್ನು ಹರಿಬಿಟ್ಟು ಎರಡೂವರೆ ವರ್ಷದ ನಂತರ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವ ಇರಾದೆಗೆ ಉಪಮುಖ್ಯಮಂತ್ರಿಯಾಗಿ ಮುಂದುವರಿದರು.

ಕಾಂಗ್ರೆಸ್‌ನಲ್ಲಿ ಕೆಲವು ರಾಜಕೀಯ ಬೆಳವಣಿಗೆ ನಡೆದ ಬಳಿಕ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಐದು ವರ್ಷ ಪೂರೈಸಲಿದ್ದಾರೆ ಎಂಬುದಾಗಿ ಅವರ ಬೆಂಬಲಿಗರು ಹೇಳಿಕೆ ನೀಡುತ್ತಿದ್ದಂತೆ ಡಿ.ಕೆ.ಶಿವಕುಮಾರ್‌ ಬಣದಲ್ಲಿ ಸಂಚಲನ ಮೂಡಿಸಿತು. ಬಳಿಕ ಅವರ ಅಸ್ತಿತ್ವ ಸಾಬೀತುಪಡಿಸಲು ಇನ್ನಿಲ್ಲದ ಕಸರತ್ತು ನಡೆಯಿತು. ಸರ್ಕಾರದ ವಿರುದ್ಧ ಕೆಲವೊಂದು ವಿವಾದಗಳು ಸೃಷ್ಟಿಯಾಗಲು ಸಹ ಇವರ ಪಾತ್ರ ಇದೆ ಎಂಬುದಾಗಿ ಪ್ರತಿಪಕ್ಷಗಳೇ ಆರೋಪ ಮಾಡಿದವು.

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅತ್ಯಾಚಾರ ಆರೋಪದಡಿ ಜೈಲುಪಾಲಾಗಿದ್ದಾರೆ. ಲೋಕಸಭೆ ಚುನಾವಣೆ ವೇಳೆ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಬಹಿರಂಗಗೊಂಡವು. ಇದು ರಾಜಕೀಯವಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಕುಟುಂಬಕ್ಕೆ ಕಪ್ಪುಚುಕ್ಕೆಯಾಗಿ ಪರಿಣಾಮ ಬೀರಿದವು. ಅಲ್ಲದೇ, ಪ್ರಜ್ವಲ್‌ ರೇವಣ್ಣ ರಾಜಕೀಯ ಜೀವನ ಹೆಚ್ಚು ಕಡಿಮೆ ಮುಕ್ತಾಯಗೊಂಡಂತಾಗಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿದ್ದು ಡಿ.ಕೆ.ಶಿವಕುಮಾರ್‌ ಎಂಬುದಾಗಿ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ತಮಿಳುನಾಡಿನ ಕೊಯಮತ್ತೂರಿನ ಇಶಾ ಫೌಂಡೇಷನ್‌ ನಡೆಸಿದ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಜತೆ ವೇದಿಕೆ ಹಂಚಿಕೊಂಡ ಡಿ.ಕೆ. ಶಿವಕುಮಾರ್‌ ಬಗ್ಗೆ ಸ್ವಪಕ್ಷೀಯರೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷ ಮುಖಂಡ ರಾಹುಲ್‌ ಗಾಂಧಿ ಅವರನ್ನೇ ವ್ಯಂಗ್ಯ ಮಾಡಿದ್ದ ಬಿಜೆಪಿ ಮುಖಂಡ ಶಾ ಜತೆ ವೇದಿಕೆ ಹಂಚಿಕೊಂಡ ಬಗ್ಗೆ ಎಐಸಿಸಿ ಮುಖಂಡರೊಬ್ಬರು ಬಹಿರಂಗ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು. ಇದು ಡಿಕೆಶಿ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ ಎಂಬ ಸಂದೇಶವೂ ಆ ಮೂಲಕ ರವಾನೆಯಾಗಿದ್ದು, ಅವರ ಪಾಲಿಗೆ ಪಕ್ಷದೊಳಗಿನ ಹಿಡಿತ ಕಡಿಮೆಯಾಗುವಂತೆ ಮಾಡಿದೆ ಎಂದು ವಿಶ್ಲೇಷಿಸಲಾಗಿದೆ.

ದೆಹಲಿಯಲ್ಲಿ ನಡೆದ ಖಾಸಗಿ ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಸರ್ಕಾರಿ ಗುತ್ತಿಗೆಗಳಲ್ಲಿ ಮುಸಲ್ಮಾನರಿಗೆ ಶೇ. 4ರಷ್ಟು ಮೀಸಲಾತಿ ನೀಡುವ ವಿಚಾರವಾಗಿ ಮಾತನಾಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಅಲ್ಪಸಂಖ್ಯಾತರಿಗೆ ಕೋಟಾ ನೀಡಲು ಸಂವಿಧಾನದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗುವುದು, ಎಂಬರ್ಥಬರುವಂತೆ ಹೇಳಿಕೆ ನೀಡಿದ್ದರು. ಇದು ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಯಾಗುವಂತೆ ಮಾಡಿತ್ತು. ಜತೆಗೆ ದೆಹಲಿಯ ಕಾಂಗ್ರೆಸ್‌ ನಾಯಕರಿಗೆ ಮುಜುಗರ ವಾತಾವರಣ ಸೃಷ್ಟಿಸಿತ್ತು.

ಇದಲ್ಲದೇ, ಕಾಂಗ್ರೆಸ್‌ ಸರ್ಕಾರ ವಿರುದ್ಧ ಕೇಳಿಬಂದ ಆರೋಪಗಳಲ್ಲಿಯೂ ಡಿ.ಕೆ.ಶಿವಕುಮಾರ್‌ ಬಣದ ಹೆಸರು ಕೇಳಿ ಬಂದವು. ಅವರ ರಾಜಕೀಯ ಷಡ್ಯಂತ್ರಗಳ ಬಗ್ಗೆ ತೀವ್ರ ಚರ್ಚೆಯನ್ನುಂಟು ಮಾಡಿತು. ಪಕ್ಷವನ್ನು ಅಧಿಕಾರಕ್ಕೆ ತರಲು ಸಂಘಟನಾ ಚತುರ ಎನ್ನಿಸಿಕೊಂಡಿದ್ದ ಡಿ.ಕೆ.ಶಿವಕುಮಾರ್‌ ತಮ್ಮ ರಾಜಕೀಯ ವ್ಯಕ್ತಿತ್ವವನ್ನು ನಕಾರಾತ್ಮಕವಾಗಿ ಬಿಂಬಿಸಲು ಹೊರಟಿದ್ದಾರೆ ಎಂದು ಅಭಿಪ್ರಾಯಗಳು ವ್ಯಕ್ತವಾಗಿವೆ.

ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮಾಡಿರುವುದು ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ನಲ್ಲಿ ಮಾತ್ರವಲ್ಲ, ಕಾಂಗ್ರೆಸ್‌ನಲ್ಲಿಯೇ ಅಸಮಾಧಾನ ವ್ಯಕ್ತವಾಗಿದೆ. ವೈಯಕ್ತಿಕ ರಾಜಕೀಯ ಜಿದ್ದಿಗಾಗಿ ಇದನ್ನು ಮಾಡಿರುವುದಕ್ಕೆ ಕಾಂಗ್ರೆಸ್ಸಿಗರೇ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಬಾರಿಯೂ ಡಿ.ಕೆ.ಶಿವಕುಮಾರ್‌ ವೈಯಕ್ತಿಕವಾಗಿ ಬಿಂಬಿಸಿಕೊಳ್ಳಲು ಸರ್ಕಾರದ ಅಸ್ತ್ರವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಈ ಎಲ್ಲದರ ನಡುವೆ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆಯ ಕ್ರೆಡಿಟ್‌ ತೆಗೆದುಕೊಳ್ಳಲು ಏಕಾಏಕಿ ತೀರ್ಮಾನ ಕೈಗೊಂಡು ಅಭಿನಂದನಾ ಸಮಾರಂಭವನ್ನು ಆಯೋಜನೆ ಮಾಡಿದರು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ 11 ಮಂದಿ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡರು. ಪೊಲೀಸ್‌ ಭದ್ರತೆ ವೈಫಲ್ಯತೆ ಎಂಬುದು ಮೇಲ್ನೋಟಕ್ಕೆ ಹೇಳುತ್ತಿದ್ದರೂ, ಇದಕ್ಕೆ ಮೂಲ ಕಾರಣ ಡಿ.ಕೆ.ಶಿವಕುಮಾರ್‌ ತೀರ್ಮಾನ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕಾಂಗ್ರೆಸ್‌ ಪಕ್ಷದಲ್ಲಿಯೇ ಈ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಅವರ ಆಪ್ತರು ಸಭೆ ನಡೆಸಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು, ಬಿಜೆಪಿ-ಜೆಡಿಎಸ್‌ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಡಿ.ಕೆ.ಶಿವಕುಮಾರ್‌ ವಿರುದ್ದ ಟೀಕಾಪ್ರಹಾರ ನಡೆಸಿತು. ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಂತೂ ಘಟನೆಗೆ ಡಿ.ಕೆ.ಶಿವಕುಮಾರ್‌ ಅವರೇ ನೇರ ಹೊಣೆ ಎಂಬುದಾಗಿ ವಾಗ್ದಾಳಿ ನಡೆಸಿದರು.

ಕಾಲ್ತುಳಿತ ದುರಂತವು ಡಿ.ಕೆ.ಶಿವಕುಮಾರ್‌ ಅವರಿಗೆ ಮುಖಭಂಗವನ್ನುಂಟು ಮಾಡಿದೆ. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಗೃಹ ಸಚಿವರ ಅಭಿಪ್ರಾಯವನ್ನೂ ಸಹ ಪಡೆದುಕೊಳ್ಳದೆ ಏಕಾಏಕಿ ತೀರ್ಮಾನ ಕೈಗೊಂಡರು. ಕಾಲ್ತುಳಿತ ದುರಂತದಿಂದ ಡಿ.ಕೆ.ಶಿವಕುಮಾರ್‌ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ ಎಂಬ ಅಭಿಪ್ರಾಯಗಳು ರಾಜಕೀಯವಲಯದಲ್ಲಿ ಕೇಳಿ ಬಂದಿದೆ.