ಮಂಗಳೂರು:- ರಾಜೇಂದ್ರಕುಮಾರ್ ಮತ್ತವರ ತಂಡ ಯಾವುದೇ ಅಧಿಕಾರ ಬಯಸದೆ ನಿಮ್ಮ ಸೇವೆ ಮಾಡುತ್ತಾ ಇತಿಹಾಸ ನಿರ್ಮಿಸಿದ್ದಾರೆ. ಜನನ ಉಚಿತ, ಮರಣ ಖಚಿತ. ಹುಟ್ಟು-ಸಾವುಗಳ ನಡುವೆ ಏನಾದರೂ ಮಾಡಬೇಕು ಎಂದು ಹೆಣ್ಣುಮಕ್ಕಳ ಬಾಳಿನಲ್ಲಿ ಜ್ಯೋತಿ ಬೆಳಗಿಸುವ ಕೆಲಸ ಇವರು ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಮಂಗಳೂರಿನ ಬಂಗ್ರ ಕೂಳೂರುನಲ್ಲಿ ಶನಿವಾರ ನಡೆದ ನವೋದಯ ಸ್ವಸಹಾಯ ಗುಂಪುಗಳ ರಜತ ಸಂಭ್ರಮ 2025 ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಪ್ಪತ್ತೈದು ವರ್ಷದ ಹಿಂದೆ ಎಸ್ ಎಂ.ಕೃಷ್ಣ ಅವರ ಸಂಪುಟದಲ್ಲಿ ಸಹಕಾರ ಮಂತ್ರಿಯಾಗಿದ್ದ ವೇಳೆ ಈ ಕಾರ್ಯಕ್ರಮದ ಜ್ಯೋತಿ ಬೆಳಗಿಸಿದ್ದೆ. ಅಂದು ಹಚ್ಚಿದ ಹಣತೆ ಲಕ್ಷಾಂತರ ಮಹಿಳೆಯರ ಬಾಳಿನಲ್ಲಿ ಬೆಳಕು ತಂದಿದೆ, ಇನ್ನೂ ಉರಿಯುತ್ತಲೇ ಇದೆ. ʼಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನಸಂಪದಂ, ಜ್ಞಾನ ಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ’ ಎಂಬಂತೆ ಎಲ್ಲರಿಗೂ ಮಂಗಳವಾಗಲಿ, ಶುಭವಾಗಲಿ, ಆರೋಗ್ಯವಂತರಾಗಲಿ, ಐಶ್ವರ್ಯವಂತರಾಗಲಿ, ನೆಮ್ಮದಿಯಿಂದ ಬದುಕಲಿ ಎಂದು ಈ ಜ್ಯೋತಿಯನ್ನು ಮತ್ತೆ ನಾವೆಲ್ಲ ಬೆಳಗಿದ್ದೇವೆ ಎಂದು ಹೇಳಿದರು.
ಹೆಣ್ಣು ಕುಟುಂಬದ ಕಣ್ಣು. ಅವರಿಗೆ ಆರ್ಥಿಕ ಶಕ್ತಿ ನೀಡಬೇಕು ಎಂದು ಕೃಷ್ಣ ಅವರ ಸರ್ಕಾರದಲ್ಲಿ ಸ್ತ್ರೀ ಶಕ್ತಿ ಕಾರ್ಯಕ್ರಮ ರೂಪಿಸಿದ್ದೆವು. ರಾಜೇಂದ್ರ ಕುಮಾರ್ ಅವರು ಯಾವುದೇ ರಾಜಕೀಯ ಸ್ಥಾನಮಾನದ ನಿರೀಕ್ಷೆ ಇಲ್ಲದೆ ಕರಾವಳಿ ಕ್ಷೇತ್ರದಲ್ಲಿ ಸಹಕಾರಿ ಧುರೀಣರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಜನರ- ತಾಯಂದಿರ ಸೇವೆ ಮಾಡಬೇಕು. ಎಲ್ಲರಿಗೂ ಆರ್ಥಿಕವಾಗಿ ಶಕ್ತಿ ಕೊಡಬೇಕೆಂದು ನವೋದಯ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದರು ಎಂದರು.
ಲಕ್ಷಾಂತರ ತಾಯಂದಿರು ತಮ್ಮ ಕುಟುಂಬಗಳನ್ನು ಬೆಳೆಸಿ, ದೇಶದ ಆಸ್ತಿಯಾಗಿ ಉಳಿದುಕೊಂಡಿದ್ದಾರೆ. ಇದೇ ನಾರಿ ಶಕ್ತಿ. ನಮ್ಮಲ್ಲಿ ಆಹ್ವಾನ ಪತ್ರಿಕೆ ನೀಡುವಾಗ ಶ್ರೀಮತಿ- ಶ್ರೀ ಎಂದು ಬರೆದಿದ್ದರು. ಶಿವನನ್ನು ಪಾರ್ವತಿ ಪರಮೇಶ್ವರ, ಶ್ರೀನಿವಾಸನನ್ನು ಲಕ್ಷ್ಮೀ- ವೆಂಕಟೇಶ್ವರ ಎನ್ನುತ್ತೇವೆ. ಗಣೇಶನ ಹಬ್ಬಕ್ಕೂ ಮುಂಚೆ ಗೌರಿ ಹಬ್ಬ ಮಾಡುತ್ತೇವೆ, ಭೂಮಿಗೆ ಮಾತೃಭೂಮಿ ಎನ್ನುತ್ತೇವೆ; ಭಾಷೆಗೆ ಮಾತೃಭಾಷೆ ಎನ್ನುತ್ತೇವೆ. ಹೀಗೆ ಮಹಿಳೆಯರಿಗೆ ಆದ್ಯತೆ ನೀಡುವುದು ನಮ್ಮ ಸಂಸ್ಕೃತಿ ಎಂದರಲ್ಲದೆ ಪ್ರಯತ್ನಗಳು ವಿಫಲ ಆಗಬಹುದು, ಆದರೆ, ಪ್ರಾರ್ಥನೆ ವಿಫಲವಾಗಲ್ಲ. ಪ್ರಾರ್ಥನೆ ಸಲ್ಲಿಸಲು ಎಂದೇ ಕರಾವಳಿ ಪ್ರದೇಶಕ್ಕೆ ಬರುತ್ತೇವ ಸಂತೋಷ ಆಗುತ್ತದೆ. ಈ ಭಾಗದ ಕಟೀಲು, ಧರ್ಮಸ್ಥಳ, ಸುಬ್ರಹ್ಮಣ್ಯದಂಥ ಶಕ್ತಿ ತಾಣವಾಗಿದೆ. ಈ ಪ್ರದೇಶ ಯಾವುದರಲ್ಲೂ ಕಮ್ಮಿ ಇಲ್ಲ, ಶಿಕ್ಷಣ, ಧಾರ್ಮಿಕತೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಇಲ್ಲಿ ಪ್ರಗತಿ ಸಾಧಿಸಲಾಗಿದೆ ಎಂದರು.
ಈ ಭಾಗದ ಪ್ರತಿಭಾವಂತರು ಉದ್ಯೋಗಕ್ಕಾಗಿ ಹೊರದೇಶಕ್ಕೆ ಹೋಗುತ್ತಿದ್ದಾರೆ. ವಿದ್ಯಾವಂತ ಯುವಕರು ನಾಡಿನ ಶಕ್ತಿ. ಅವರು ವಿದ್ಯೆ ಪಡೆದು, ಇಲ್ಲೇ ಉದ್ಯೋಗ ಮಾಡುವಂತಾಗಲು ನನ್ನೆಲ್ಲ ಶಾಸಕ ಮಿತ್ರರು ಶ್ರಮಿಸಬೇಕು ಎಂದು ತಿಳಿಸಿದ್ದೇನೆ ಎಂದರು.
ಒಬ್ಬನಿಗೆ ಮೀನು ಕೊಟ್ಟರೆ ಒಂದು ಹೊತ್ತು ಊಟಕ್ಕೆ, ಅದೇ ಮೀನುಗಾರಿಕೆ ಕಲಿಸಿದರೆ ಅವನ ಜೀವನಕ್ಕೆ ನೆರವಾಗುತ್ತದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಿಸ್ ಹೇಳಿದ್ದನ್ನು ನೆನಪಿಸಿಕೊಂಡ ಅವರು ದೇವರು ವರನೂ ಕೊಡಲ್ಲ, ಶಾಪನೂ ಕೊಡಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಅವಕಾಶ ಸಿಕ್ಕಾಗ ಜನರ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.