ಶಿವಮೊಗ್ಗ

ದೇಶದ ಜನರಿಗೆ ಅತ್ಯಂತ ನೋವಿನ ದಿನ.- ಸ್ಪೀಕರ್ ಯು.ಟಿ.ಖಾದರ್

ಶಿವಮೊಗ್ಗ:- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಶಿವಮೊಗ್ಗದ ಮಂಜುನಾಥ್ ರಾವ್ ಅವರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ವೇಳೆ ಅವರ ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜಯ್ ತೋರಿದ ಧೈರ್ಯ ನಿಜವಾಗಲೂ ಆ ಸಂದರ್ಭದಲ್ಲಿ ದೇವರು ಅವರಿಗೆ ಕೊಟ್ಟಂತಹ ಶಕ್ತಿ ಎಂದು ಸ್ಪೀಕರ್ ಯು.ಟಿ.ಖಾದರ್ ಶರೀಫ್ ಹೇಳಿದರು.
ಸಾಂತ್ವನ ಹೇಳಲು ಶಿವಮೊಗ್ಗದ ಮಂಜುನಾಥ್ ರವರ ಮನೆಗೆ ಶುಕ್ರವಾರದಂದು ತೆರಳಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಯೋತ್ಪಾದಕರ ಅಟ್ಟಹಾಸ ನಡೆಸಿದ್ದು, ದೇಶದ ಜನರಿಗೆ ಅತ್ಯಂತ ನೋವಿನ ದಿನ. ಎಷ್ಟೇ ಸಾಂತ್ವನ ಹೇಳಿದರೂ ಅವರ ನೋವು ಶಮನ ಮಾಡಲು ಸಾಧ್ಯವಿಲ್ಲ. ಹೆತ್ತವರು ಹಾಗೂ ಮನೆಯವರಿಗೆ ಮಾತ್ರ ಆ ನೋವು ಗೊತ್ತಿದೆ. ಆ ಕುಟುಂಬ ಮತ್ತೆ ಸಾಮಾನ್ಯ ಬದುಕಿಗೆ ಮರಳುವ ವಾತಾವರಣವನ್ನು ನಾವೆಲ್ಲರೂ ಸೇರಿ ಕಲ್ಪಿಸಬೇಕಿದೆ ಎಂದು ಹೇಳಿದರು.