ಮಂಗಳೂರು:- ಮೇ 16ರಂದು ಮಂಗಳೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದು, ಈ ವೇಳೆ ದೇಶದಲ್ಲೇ ಅತ್ಯಂತ ದೊಡ್ಡದಾದ ಹಾಗೂ ವಿವಿಧ ಇಲಾಖೆಗಳ ಕಚೇರಿಗಳನ್ನು ಒಂದೇ ಸೂರಿನಡಿ ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಲೋಕಾರ್ಪಣೆಗೊಳ್ಳಲಿದೆ.
ಸಿದ್ದರಾಮಯ್ಯ ಅವರು ಪಾಲ್ಗೊಳ್ಳುವ ಕಾರ್ಯಕ್ರಮದಲ್ಲಿ 8000 ಮಂದಿ ಫಲಾನುಭವಿಗಳಿಗೆ ಮನೆಯ ಹಕ್ಕುಪತ್ರ ವಿತರಣೆ, ಅಲ್ಪಸಂಖ್ಯಾತ ನಿಗಮ, ಅಂಬೇಡ್ಕರ್ ನಿಗಮ ಸಹಿತ ಮೂರು ನಿಗಮಗಳ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸವಲತ್ತುಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅದೇ ದಿನ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಕ್ರೀಡಾಂಗಣ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ 8 ವರ್ಷಗಳ ಹಿಂದೆಯೇ ಶಿಲಾನ್ಯಾಸ ನೆರವೇರಿತ್ತಾದರೂ ಅದು ಸಂಪೂರ್ಣಗೊಂಡಿರಲಿಲ್ಲ.
ಸುಮಾರು 75 ಕೋಟಿ ರೂಪಾಯಿ ವೆಚ್ಚದಲ್ಲಿ 22 ಬೇರೆ ಬೇರೆ ಇಲಾಖೆಗಳ ಕಚೇರಿಗಳನ್ನು ಒಂದೇ ಕಡೆ ನಿರ್ಮಾಣ ಮಾಡುವ ಮೂಲಕ ಜನರಿಗೆ ತಮ್ಮ ಕೆಲಸವನ್ನು ಸುಸೂತ್ರವಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಫಲಾನುಭವಿಗಳ ಜೊತೆ ಚುನಾಯಿತ ಜನಪ್ರತಿನಿಧಿಗಳನ್ನು ಕೂಡಾ ಆಮಂತ್ರಿಸಲಾಗಿದೆ. ಈಗಾಗಲೇ ಚುನಾವಣೆಗೆ ಸ್ಪರ್ಧಿಸಿದ್ದ ನಾಯಕರು, ಪಕ್ಷದ ಪ್ರಮುಖರು, ನಾಯಕರ ಜೊತೆ ಸಭೆ ನಡೆಸಲಾಗಿದೆ. ಮುಖ್ಯಮಂತ್ರಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ನಿರ್ಣಯಿಸಲಾಗಿದೆ ಎಂದು ಪಕ್ಷದಿಂದ ಮಾಹಿತಿ ಹೊರ ಬಂದಿದೆ.