ಚಿಕ್ಕಮಗಳೂರು

ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತುವರ ವಿರುದ್ಧ ಜಾಗೃತರಾಗಿರಬೇಕು.- ಟಿಡಿಆರ್

ಚಿಕ್ಕಮಗಳೂರು:- ಎನ್.ಆರ್.ಪುರದ ಪಟ್ಟಣದಲ್ಲಿ ಸೋಮವಾರದಂದು ನರಾಪುರದ ಹಜರತ್ ಹಯಾತ್ ಷಾ ವಲಿ ಅಲೈ ದರ್ಗಾದ 136ನೇ ವರ್ಷದ ಉರೂಸ್ ಆಚರಣೆ ಸಮಾರಂಭದ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಗೌಡರು ಮಾತನಾಡಿ, ಉರುಸ್ ಸೋದರತ್ವ, ಸಹಬಾಳ್ವೆಯ ಸಂಕೇತವಾಗಿದೆ. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಎಂ ಶ್ರೀನಿವಾಸ್ ರವರ ಕೊಡುಗೆ ಅಪಾರವಾಗಿದೆ. ಈ ಹಿಂದೆ ರೋಗ ರುಜಿನಗಳಿಂದ ಜನರ ರಕ್ಷಿಸಿದ ಕೀರ್ತಿ ಈ ದರ್ಗಾಕ್ಕಿದೆ. ನನ್ನ ಅಧಿಕಾರದ ಅವಧಿಯಲ್ಲಿ ಇಲ್ಲಿ ಯಾವುದೇ ಕೋಮುಗಲಭೆಗಳಾಗಿಲ್ಲ, ಅದಕ್ಕೆ ನಾನು ಅವಕಾಶಗಳನ್ನು ಕೊಟ್ಟಿಲ್ಲ. ಧರ್ಮ, ಜಾತಿಗಳ ನಡುವೆ ವಿಷಬೀಜ ಬಿತ್ತುವರ ವಿರುದ್ಧ ಜನರು ಜಾಗೃತರಾಗಿರಬೇಕು. ಧರ್ಮದ ಬಗ್ಗೆ ನಂಬಿಕೆ ಉಳ್ಳವರಾಗಬೇಕು, ನಂಬಿಕೆ ನಮ್ಮ ಪಾಲಿನ ದೇವರು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾದ ಎಂ.ಶ್ರೀನಿವಾಸ್ ಮಾತನಾಡಿ, ನ.ರಾ.ಪುರದ ಸಮದ್ ಸಾಹೇಬ್ ರವರ ಮನೆಗೆ 1889ರಲ್ಲಿ ಸಂತರು ಬರುತ್ತಿದ್ದು, ಅವರು ದೈವಾಂಶ ಸಂಭೂತರಾಗಿದ್ದರು. ಅವರಲ್ಲಿ ದೈವಿಕವಾದ ಶಕ್ತಿ ಅವರಲ್ಲಿತ್ತು, ಅವರು ಓರ್ವ ಸಂತರಾಗಿದ್ದರು ಇಂದಿಗೂ ನರಾಪುರದಲ್ಲಿ ಹಿಂದೂ ಮುಸ್ಲಿಂ ಸಹೋದರರಂತೆ ಬದುಕುತ್ತಿದ್ದೇವೆ. ನಮ್ಮಲ್ಲಿ ಜಾತಿ ಅಥವಾ ಧರ್ಮ ಸಂಘರ್ಷ ಯಾವುದು ನಡೆದಿಲ್ಲ, ಅಣ್ಣ ತಮ್ಮಂದಿರಂತೆ ಸಹಬಾಳ್ವೆ ನಡೆಸುತ್ತಿದ್ದೇವೆ. ನಮ್ಮ ಹಿರಿಯರು ನಮಗೆ ಮಾರ್ಗದರ್ಶಕರಾಗಿದ್ದಾರೆ, ಆದರ್ಶಪ್ರಾಯಾರಾಗಿದ್ದಾರೆ. ಇಂದಿನ ಜನಾಂಗ ನಮ್ಮ ಪೂರ್ವಿಕರ ವಿಚಾರಧಾರೆಗಳನ್ನು ಅರ್ಥಮಾಡಿಕೊಳ್ಳಬೇಕು, ಗುರು ಹಿರಿಯರ ಬಗ್ಗೆ ತಿಳಿದುಕೊಳ್ಳಬೇಕು ಎಂದರು. 106 ವರ್ಷಗಳ ಹಿಂದೆ ಎಡೆಹಳ್ಳಿಯಾಗಿದ್ದ ನರಾಪುರಕ್ಕೆ ಅಂದಿನ ಮೈಸೂರ ಅರಸರಾದ ನರಸಿಂಹರಾಜ ಒಡೆಯರು ಬಂದು ಹೋಗಿದ್ದರು. ಅವರು ಬಂದು ಹೋದ ನೆನಪಿಗಾಗಿ ಎಡೆ ಹಳ್ಳಿಯಾಗಿದ್ದ ನರಾಪುರ ನರಸಿಂಹರಾಜಪುರವಾಯಿತು.

ಸಿದ್ದರಾಮಯ್ಯನವರು ಸಿಎಂ ಆಗಿ ನರಸಿಂಹರಾಜಪುರಕ್ಕೆ ಬಂದಿದ್ದರು ಅವರಿಗೂ ಕೂಡ ನೀವು ಬಂದು ಹೋದ ನೆನಪಿಗಾಗಿ ನರಾಪುರಕ್ಕೆ ಏನಾದರೂ ಕೊಡುಗೆ ನೀಡಿ ಎಂದಿದ್ದೆ, ಅದಕ್ಕೆ ಮನ್ನಣೆ ನೀಡಿದ ಸಿದ್ದರಾಮಯ್ಯನವರು 35 ಕೋಟಿ ರೂಪಾಯಿ ವೆಚ್ಚದ ಹೊನ್ನೆಕೂಡಿಗೆ ಸೇತುವೆಗೆ ಅನುದಾನ ನೀಡಿದಲ್ಲದೆ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗಿನ ರಸ್ತೆ ಅಗಲೀಕರಣಕ್ಕೆ 60 ಕೋಟಿ ಅನುದಾನ ನೀಡಿದ್ದಾರೆ. ಇಷ್ಟರಲ್ಲಿ ಕಾಮಗಾರಿ ನಡೆಯಲಿದೆ, ಅಲ್ಲದೆ ಕಡಹಿನಬೈಲು ಬಕ್ರಿಹಳ್ಳ ಏತ ನೀರಾವರಿ ಯೋಜನೆಗೆ ಸಾಕಷ್ಟು ಅನುದಾನ ನೀಡಿ ಬಂದು ಉದ್ಘಾಟಿಸಿದ್ದಾರೆ. ಆದರಿಂದ ಈ ಭಾಗದ 1300 ಎಕ್ರೆ ರೈತರ ಜಮೀನು ನೀರಾವರಿಯಾಗಿದೆ, ನರಾಪುರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗುವುದು, ಈ ಹಿಂದೆ ಸ್ಮಶಾನದಂತಿದ್ದ ಪ್ರವಾಸಿ ಮಂದಿರ ಈಗ ತಲೆ ಎತ್ತಿ ನಿಂತಿದೆ. ನನ್ನ ಅಧಿಕಾರವಧಿಯಲ್ಲಿ ಇಲ್ಲಿನ ಚರ್ಚ್, ಮಂದಿರ, ಮಸೀದಿಗಳಿಗೆ ಸಾಕಷ್ಟು ಅನುದಾನ ನೀಡಿದ್ದೇನೆ ಎಂದರು.

ರಾಜ್ಯ ಜೆಡಿಎಸ್ ನ ಉಪಾಧ್ಯಕ್ಷರು, ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ಧಾರ್ಮಿಕ ಸಂಸ್ಥೆಗಳು ರಾಜಕೀಯದಿಂದ ಮುಕ್ತವಾಗಿರಬೇಕು, ಯಾವುದೇ ಧರ್ಮದ ಆಚರಣೆಗಳು ಇನ್ನೊಂದು ಧರ್ಮದ ವಿರುದ್ಧವಾಗಿರಬಾರದು, ಎಲ್ಲಾ ಧರ್ಮಿಯರು ಧರ್ಮದ ಆಚರಣೆಗಳನ್ನು ಸಂಭ್ರಮಿಸಬೇಕು. ಸಂಸ್ಕಾರ ಸಭೆಗಳು ಧರ್ಮದ ಭದ್ರ ಬುನಾದಿ ಆಗಬೇಕು. ಎಲ್ಲಿ ನಂಬಿಕೆ ಇದೆಯೋ ಅಲ್ಲಿ ಸತ್ಯ ಇರುತ್ತದೆ. ಇಲ್ಲಿ ನಂಬಿಕೆ ಇಲ್ಲವೋ ಅಲ್ಲಿ ಕ್ರೋಧವಿರುತ್ತದೆ ಎಂದ ಅವರು, ನಾವು ಭಯದ ವಾತಾವರಣದಿಂದ ಹೊರ ಬರಬೇಕು ಎಂದರು.

ಇದೇ ಸಂದರ್ಭದಲ್ಲಿ ಗಣ್ಯರನ್ನು ದರ್ಗಾ ಸಮಿತಿ ವತಿಯಿಂದ ವಿವಿಧ
ಸನ್ಮಾನಿಸಲಾಯಿತು. ಸಭೆಯಲ್ಲಿ ವಿವಿಧ ಮಸೀದಿ ಸಮಿತಿಯ ಅಧ್ಯಕ್ಷರು, ಧರ್ಮ ಗುರುಗಳು, ದರ್ಗಾ ಉರುಸ್ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೂ ಮುನ್ನ ವೇದಿಕೆಯ ಗಣ್ಯರು ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಜಿ.ಪಂ.ಮಾಜಿ ಸದಸ್ಯ ಸದಾಶಿವ ಸೇರಿದಂತೆ ಪಟ್ಟಣ ಪಂಚಾಯತ್ ಅಧ್ಯಕ್ಷೆ ಜುಬೇದ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್ ಶೆಟ್ಟಿ, ಸಾದಿಕ್ ಬಾಷ, ನಾಸೀರ್ ಖಾನ್ ಉಪಸ್ಥಿತರಿದ್ದರು.