ಬೆಂಗಳೂರು:- ಸಮಾಜದಲ್ಲಿ ಬದುಕಬೇಕೆಂದರೆ ಸುತ್ತ ಮುತ್ತ ಇರುವ ಜನರನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ಕರುಣೆ ಮತ್ತು ಕಾಳಜಿಯನ್ನು ಕೂಡ ಹೊಂದಬೇಕು. ಆದರೆ, ಈಗ ಕಾಲ ಮೊದಲಿನಂತೆ ಇಲ್ಲ. ಈ 5G ಯುಗದಲ್ಲಿ ಪ್ರೀತಿ.. ನಂಬಿಕೆ.. ಕರುಣೆ .. ವಿಶ್ವಾಸಕ್ಕೆ ಬೆಲೆ ಇಲ್ಲ. ಮಾನವೀಯತೆಯನ್ನು ಮರೆತು ಅನೇಕರು ಸ್ವಾರ್ಥ ಜೀವನ ನಡೆಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾಗೆ ಇಂದು ಅನೇಕರು ಶರಣಾಗಿ ಫೇಸ್ ಬುಕ್, ಇನ್ಸ್ಟಾಗ್ರಾಮ್, ಎಕ್ಸ್, ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣು ಮಕ್ಕಳು, ಮಹಿಳೆಯರು. ಸಾಮಾನ್ಯ ಮಹಿಳೆಯರು ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಮುಂಚೂಣಿಯಲ್ಲಿರುವ ಅನೇಕ ಮಹಿಳೆಯರೂ ಟ್ರೋಲಿಂಗ್ಗೆ ಒಳಗಾಗಿದ್ದಾರೆ. ಸದ್ಯ ಭಾವನಾ ರಾಮಣ್ಣ ಅವರ ವಿಚಾರದಲ್ಲಿ ಕೂಡ ಅನೇಕರು ಇದೇ ಕೆಲಸವನ್ನು ಮಾಡುತ್ತಿದ್ದಾರೆ.
YES…ಇಂದಿನ ಕಾಲದಲ್ಲಿ ತಂದೆ-ತಾಯಿ ಇಬ್ಬರು ಇದ್ದರೂ ಕೂಡ ಮಕ್ಕಳನ್ನು ಸಾಕಿ ಸಲುಹುದು ಕಷ್ಟದ ಕೆಲಸ. ಅದರಲ್ಲಿಯೂ ತಾಯಿಯೊಬ್ಬಳೇ ಮಕ್ಕಳನ್ನು ಸಾಕಿ ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು ಸುಲಭದ ಕೆಲಸ ಅಲ್ಲ. ಈ ಅಸಾಧ್ಯ ಕೆಲಸವನ್ನು ಸದ್ಯ ಭಾವನಾ ಮಾಡಲು ಮುಂದಾಗಿದ್ದಾರೆ. ತಮ್ಮ ಖುಷಿ.. ತಮ್ಮ ಸಂತೃಪ್ತಿಗೋಸ್ಕರ ಮದುವೆಯಾಗದೇ ಐವಿಎಫ್ ಅಂದರೆ ಇನ್ ವಿಟ್ರೊ ಫರ್ಟಿಲೈಸೇಶನ್ ಸಹಾಯದಿಂದ ಅನೇಕರು ತಾಯಿಯಾಗುತ್ತಿದ್ದಾರೆ. ಆದರೆ, ಈ ವಿಚಾರ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಟ್ರೋಲ್ ಆಗುತ್ತಾರೆ. ಮೀಮ್ಸ್ ಹೆಸರಿನಲ್ಲಿ ಹಲವರು ನಟಿ ಭಾವನಾ ಅವರ ಹಿಂದೆ ಬಿದ್ದಿದ್ದಾರೆ. ತೀರಾ ಅಸಹ್ಯ.. ಅಶ್ಲೀಲ.. ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಇದೆಲ್ಲ ಮಾಡುವ ಬದಲು ಮದ್ವೆನೇ ಆಗಬಹುದಿತ್ತಲ್ಲ ಎಂದು ಕೇಳುತ್ತಿದ್ದಾರೆ. ಮುಂದೆ ನಿಮ್ಮ ಮಕ್ಕಳಿಗೆ ಅಪ್ಪ ಯಾರು ಎಂದು ಕೇಳಿದರೆ ನೀವೇನು ಹೇಳ್ತೀರಾ ಎಂದೆಲ್ಲ ಪ್ರಶ್ನೆ ಮಾಡುತ್ತಿದ್ದಾರೆ. ಈ ಕುರಿತು ಭಾವನಾ ಈಗ ಮಾತನಾಡಿದ್ಧಾರೆ.
ಇನ್ನು ಮಕ್ಕಳ ತಂದೆ ಯಾರು ಎನ್ನುವ ಪ್ರಶ್ನೆ ಹೇಗೆ ಎದುರಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಭಾವನಾ ನನಗಿಂತ ಹೆಚ್ಚು ನನ್ನ ಮಕ್ಕಳು ಈ ಪ್ರಶ್ನೆಯನ್ನು ಎದುರಿಸಬೇಕಾಗುತ್ತೆ ಎಂದು ಹೇಳಿದ್ದಾರೆ. ಮುಂದೆ ಮಕ್ಕಳು ಮಕ್ಕಳ ಜೊತೆ ಮಾತನಾಡುವಾಗ ಇದೆಲ್ಲ ಬಂದೇ ಬರುತ್ತೆ ಎಂದಿರುವ ಭಾವನಾ ನಾನು ನನ್ನ ಮಕ್ಕಳನ್ನು ಯಾವುದೋ ಹಾಸ್ಟೇಲ್ಗೆ ಸೇರಿಸಿ ಅವರನ್ನು ಕತ್ತಲೆಯಲ್ಲಿಡಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ.
ಸಮಾಜ ಅಂದಮೇಲೆ ಅಪ್ಪಿಕೊಳ್ಳೋರು ಇರುತ್ತಾರೆ.. ಒಪ್ಪಿಕೊಳ್ಳದೇ ಇರೋರು ಇರುತ್ತಾರೆ.. ಈ ಎರಡು ವರ್ಗ ನಮ್ಮ ಸಮಾಜದಲ್ಲಿದೆ ಎನ್ನುವುದು ನನ್ನ ಮಕ್ಕಳಿಗೆ ಗೊತ್ತಾಗಬೇಕು ಎಂದು ಹೇಳಿರುವ ಭಾವನಾ ಎಲ್ಲಿಯವರೆಗೆ ಅವರಲ್ಲಿ ಸಂಸ್ಕಾರ ಸಂಸ್ಕ್ರತಿ ಇರುತ್ತೋ ಅಲ್ಲಿಯವರೆಗೆ ಸಾಧ್ಯ ಎಂದು ಅನ್ಸುತ್ತೆ ಎಂದು ಹೇಳಿದ್ದಾರೆ.