ಬೆಂಗಳೂರು

ನನ್ನ ವ್ಯವಹಾರದ ವಿಚಾರದಲ್ಲಿ ಸಚಿವರ ಹೆಸರನ್ನು ತರಬೇಡಿ.- ಸರ್ಫರಾಜ್

ಬೆಂಗಳೂರು:- ಸಚಿವ ಜಮೀರ್ ಅಹ್ಮದ್ ಖಾನ್​ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧ ಕಾನೂನು ನಿಯಮ ಗಾಳಿಗೆ ತೂರಿ ಅಕ್ರಮ ರೆಸಾರ್ಟ್ ನಿರ್ಮಾಣ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆ ಈ ಬಗ್ಗೆ ಸ್ಪಷ್ಟನೆ ನೀಡಿದ ಸರ್ಫರಾಜ್​ ಖಾನ್, ನನ್ನ ವ್ಯವಹಾರದ ವಿಚಾರದಲ್ಲಿ ಸಚಿವರ ಹೆಸರನ್ನು ತರಬೇಡಿ ಎಂದಿದ್ದಾರೆ.

ಅಲ್ಲದೇ ಕನ್ನಡ ಸಂಘಟನೆ ಹೆಸರಲ್ಲಿ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ ಎಂದು ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಅವರು ನಾನು ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿಲ್ಲ, ಎಲ್ಲಾ ರೀತಿ ಪರವಾನಗಿ ಪಡೆದಿದ್ದೇನೆ. ಪ್ರವಾಸೋದ್ಯಮ ಇಲಾಖೆಯಿಂದ ಲೈಸನ್ಸ್​​ ಪಡೆದಿದ್ದೇನೆ ಎಂದ ಸರ್ಫರಾಜ್ ಖಾನ್​, ಕನ್ನಡ ಹೋರಾಟಗಾರ ಎಂದು ಹೇಳಿಕೊಳ್ಳುವ ರೂಪೇಶ್ ರಾಜಣ್ಣ ಬಂದು ನನ್ನ ಬಳಿ ಹಣ ಕೇಳಿದ್ದ ಎಂದು ಆರೋಪ ಮಾಡಿದ್ದಾರೆ.

ರೆಸಾರ್ಟ್​ನಲ್ಲಿ ಕೆಲಸ ಮಾಡೋರಿಗೆ ಒಂದಿಪ್ಪತ್ತು ಬಾರಿ ಕರೆ ಮಾಡಿ ಹಣ ಕೇಳಿದ್ದಾರೆ. ಕನ್ನಡ ಚಟುವಟಿಕೆ ಹೆಸರಲಿ ಬ್ಲ್ಯಾಕ್ ಮೇಲ್ ಮಾಡೋದಾ ಸರೀನಾ? ಅವರ ಮೇಲೆ ಖಂಡಿತ ಕ್ರಮ ತೆಗೆದುಕೊಳ್ತೇನೆ ಎಂದು ಸರ್ಫರಾಜ್ ಖಾನ್ ಹೇಳಿದ್ದಾರೆ.

ಕಂದಾಯವನ್ನ ಸಹ ಕಟ್ಟಿದ್ದೇನೆ, ಪಂಚಾಯತ್ ಪರ್ಮಿಷನ್ ಪಡೆದಿದ್ದೇನೆ. ಪೊಲೀಸ್ ಇಲಾಖೆಯಿಂದ ಎನ್‌ಓಸಿ ಪಡೆದಿದ್ದೇನೆ. ನನ್ನ ಫಾರ್ಮ್‌ಹೌಸ್ ಕಾನೂನು ಬದ್ದವಾಗಿ ಮಾಡಿದ್ದೇನೆ. ಲೀಗಲ್ ಆಗಿ ಮಾಡ್ತಿದ್ದೀರಾ ಇಲ್ವಾ ಎಂದು ನನ್ನನ್ನು ಕೇಳಬೇಕಿತ್ತು? ನಾನು ಈ ಜಮೀನು ಖರೀದಿ ಮಾಡಿ 20 ವರ್ಷವಾಗಿದೆ. ಕೆಲವರು ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಆದರೆ, ನಾನು ನನ್ನ ಸರ್ವಿಸ್‌ನಲ್ಲಿ ಅಕ್ರಮ ಮಾಡಿಲ್ಲ ಎಂದು ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಸ್ಪಷ್ಟವಾಗಿ ಹೇಳಿದ್ದಾರೆ.