ಹುಬ್ಬಳ್ಳಿ:- ರಾಜ್ಯ ವಿಧಾನ ಪರಿಷತ್ತಿಗೆ ಭವ್ಯ ಇತಿಹಾಸವಿದೆ, 75 ಸ್ಥಾನಗಳನ್ನು ಹೊಂದಿರೋ ಪರಿಷತ್ತಿಗೆ ವಿಧಾನಸಭೆ ಶಾಸಕರ ಮತದಾನ, ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಸದಸ್ಯರ ನೇಮಕವಾಗುತ್ತದೆ. ಇನ್ನು ರಾಜ್ಯದಲ್ಲಿ ಕಲೆ, ಸಾಹಿತ್ಯ, ಸಂಗೀತ, ಮಾಧ್ಯಮ, ಸಮಾಜಸೇವೆ ಮಾಡಿದವರನ್ನು ಸರ್ಕಾರದ ಸೂಚನೆ ಮೇರೆಗೆ ರಾಜ್ಯಪಾಲರು ನೇಮಕ ಮಾಡುತ್ತಾರೆ.
11 ಸದಸ್ಯರನ್ನು ನಾಮಕರಣ ಮಾಡಲು ಅವಕಾಶವಿದೆ, ಇನ್ನು ಅನೇಕ ಗಂಭೀರ ಮತ್ತು ಪ್ರಮುಖ ಚರ್ಚೆಗಳಿಗೆ ಸಾಕ್ಷಿಯಾಗಿರೋ ಪರಿಷತ್ತಿಗೆ ಈ ಹಿಂದೆ ಖ್ಯಾತ ಹಿಂದೂಸ್ಥಾನಿ ಗಾಯಕಿ ಗಂಗೂಬಾಯಿ ಹಾನಗಲ್, ಮಲ್ಲಿಕಾರ್ಜುನ ಮನ್ಸೂರ್, ಡಿ.ವಿ ಗುಂಡಪ್ಪ, ಎಚ್ ನರಸಿಂಹಯ್ಯ, ಖಾದ್ರಿ ಶಾಮಣ್ಣ, ದೊರೆಸ್ವಾಮಿ, ಅನಂತನಾಗ್, ಚಂದ್ರಶೇಖರ ಕಂಬಾರ್ ಸೇರಿದಂತೆ ಅನೇಕ ಮಹನೀಯರನ್ನು ನಾಮಕರಣ ಮಾಡಲಾಗಿತ್ತು. ಅವರೆಲ್ಲರು ತಮ್ಮ ಕ್ಷೇತ್ರದಲ್ಲಿ ಸಂಪಾದಿಸಿದ ಜ್ಞಾನವನ್ನು ರಾಜ್ಯದ ಅಭಿವೃದ್ದಿ ಪರ ಕೆಲಸಕ್ಕೆ ಬಳಸಿದ್ದಾರೆ. ಇದೇ ಕಾರಣಕ್ಕೆ ಪರಿಷತ್ತಿನ್ನು ಚಿಂತಕರ ಚಾವಡಿ ಎಂದು ಕರೆಯಲಾಗುತ್ತದೆ.
ಆದರೆ, ಇದೇ ಚಿಂತಕರ ಚಾವಡಿಗೆ ಇತ್ತೀಚೆಗೆ ನಾಮನಿರ್ದೇಶಗೊಳ್ಳುತ್ತಿರುವ ಹಿನ್ನೆಲೆ ನೋಡಿದಾಗ, ಬಹುತೇಕರು ಚುನಾವಣೆಯಲ್ಲಿ ಸೋತವರು, ರಾಜಕೀಯ ನಾಯಕರ ಕುಟುಂಬದವರು, ಉದ್ಯಮಿಗಳು ಹೆಚ್ಚಾಗಿ ನಾಮನಿರ್ದೇಶಗೊಳ್ಳುತ್ತಿದ್ದಾರೆ.
ಇದು ಸ್ವತಃ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸ್ಪೀಕರ್ ಹೊರಟ್ಟಿ ಅವರು ಸಿಎಂ ಮತ್ತು ಡಿಸಿಎಂಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಮೇ 27 ರಂದು ಸಿಎಂ, ಡಿಸಿಎಂಗೆ ಪತ್ರ ಬರೆದಿರುವ ಬಸವರಾಜ್ ಹೊರಟ್ಟಿ, ಸದ್ಯ ನಾಲ್ಕು ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಅವಕಾಶವಿದೆ. ನಾಮ ನಿರ್ದೇಶಿಕ ಸಧಸ್ಯರು, ಕಲೆ, ಸಾಹಿತ್ಯ, ಸಂಗೀತ, ಸಮಾಜ ಸೇವೆಸೇರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರಿರುವರನ್ನು ನಾಮ ನಿರ್ದೇಶನ ಮಾಡಲು ಅವಕಾಶವಿದೆ. ಹೀಗಾಗಿ ಸೂಕ್ತ ವ್ಯಕ್ತಿಗಳನ್ನು ನಾಮ ನಿರ್ದೇಶನ ಮಾಡೋ ಗುರುತರ ಜವಾಬ್ದಾರಿ ತಮ್ಮ ಮೇಲಿದೆ. ನಾಮನಿರ್ದೇಶನಕ್ಕಿರೋ ಮಾನದಂಡಗಳನ್ನು ಅನುಸರಿಸಿ, ಸದಸ್ಯರ ನಾಮನಿರ್ದೇಶನ ಮಾಡಬೇಕು ಅಂತ ಕೋರಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೇ ನೀಡಿರೋ ಸಭಾಪತಿ ಬಸವರಾಜ್ ಹೊರಟ್ಟಿ, ಚಿಂತಕರ ಚಾವಡಿಗೆ ಸೂಕ್ತ ಮತ್ತು ಅರ್ಹರು ನಾಮನಿರ್ದೇಶವಾಗಬೇಕು. ರಾಜಕೀಯ ನಾಯಕರ ಹಿಂಬಾಲಕರು, ಕುಟುಂಬಸ್ಥರು ಹಿಂಬಾಗಿಲ ಮೂಲಕ ಬರ್ತಿದ್ದಾರೆ. ಇದು ನಿಲ್ಲಬೇಕು. ಪರಿಷತ್, ಉತ್ತಮ ಚರ್ಚೆಗೆ ಸಾಕ್ಷಿಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು ಎಂದು ಹೇಳಿದ್ದಾರೆ.