ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರು ನಾಳೆಯಿಂದ ಏಕಾಏಕಿ ಗ್ರೇಟರ್ ಬೆಂಗಳೂರನ್ನಾಗಿ ಮಾರ್ಪಾಡು ಮಾಡಿರುವ ಸರ್ಕಾರದ ಆದೇಶಕ್ಕೆ ಕೆಲ ಬಿಬಿಎಂಪಿ ಹಿರಿಯ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏಕಾಏಕಿ ಬಿಬಿಎಂಪಿಯನ್ನು ಜಿಬಿಎ ಮಾಡಿ ಮಾರ್ಪಾಡು ಮಾಡಿ ಹೊಸ ಬೆಂಗಳೂರು ಕಾಯ್ದೆ ಜಾರಿಗೆ ತಂದಿರುವುದರಿಂದ ನಾವೆಲ್ಲಾ ನಾಳೆಯಿಂದ ಯಾವ ಕಾಯ್ದೆ ಪ್ರಕಾರ ಕರ್ತವ್ಯ ನಿರ್ವಹಿಸಬೇಕು ಎಂದು ಗೊಂದಲದಲ್ಲಿದ್ದೇವೆ ಎಂದು ಅಲವತ್ತುಕೊಂಡಿದ್ದಾರೆ.
ನಾಳೆಯಿಂದ (15.-05-2025) ಬಿಬಿಎಂಪಿ ಗ್ರೇಟರ್ ಬೆಂಗಳೂರಾಗಿ ಜಾರಿಗೆ ಬರತಕ್ಕದೆಂದು ಗೊತ್ತುಪಡಿಸಿದೆ ಎಂದು ತಿಳಿಸಲಾಗಿದೆ.
ರಾಜ್ಯಪಾಲರು ಅನುಮೋದಿಸಿರುವ ಈ ಆದೇಶವನ್ನು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ. ನಾಳೆಯಿಂದ ಜಾರಿಗೆ ಬರಲಿರುವ ಜಿಬಿಎ ಅಡಳಿತ ಕುರಿತ ಮಾಹಿತಿಯನ್ನು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೂ ರವಾನೆ ಮಾಡಲಾಗಿದೆ.
ನಾಳೆಯಿಂದ ಜಾರಿಗೆ ಬರಲಿರುವ ಜಿಬಿಎಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ. ಡಿಸಿಎಂ ಅವರು ಉಪಾಧ್ಯಕ್ಷರಾಗಲಿದ್ದು, ಬಿಬಿಎಂಪಿ ಆಡಳಿತಾಧಿಕಾರಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರು ಜಿಬಿಎ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಬಿಬಿಎಂಪಿ ರಚನೆಯಾದ ಮೇಲೆ ಬಿಬಿಎಂಪಿ ಆಯುಕ್ತರನ್ನು ಮುಖ್ಯ ಆಯುಕ್ತರನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಇದೀಗ ಬಿಬಿಎಂಪಿ ಆಡಳಿತಾವಾಧಿ ಇಂದಿಗೆ ಕೊನೆಗೊಳ್ಳುತ್ತಿರುವುದರಿಂದ ಹೊಸದಾಗಿ ಮುಖ್ಯ ಆಯುಕ್ತರಾಗಿ ನಿಯೋಜನೆಗೊಂಡಿರುವ ಮಹೇಶ್ವರ್ ರಾವ್ ಅವರ ಕಥೆ ಏನಾಗಲಿದೆ ಎಂದು ಇನ್ನು ಗೊತ್ತಾಗಿಲ್ಲ.
ನಾಳೆಯಿಂದ ಜಿಬಿಎ ಅಸ್ಥಿತ್ವಕ್ಕೆ ಬರುತ್ತಿರುವುದರಿಂದ ಭವಿಷ್ಯದಲ್ಲಿ ಬೆಂಗಳೂರನ್ನು ಮೂರು ಪಾಲಿಕೆಗಳನ್ನಾಗಿ ವಿಭಜಿಸಿ ಒಂದೊಂದು ಪಾಲಿಕೆಗೆ ಒಬ್ಬೊಬ್ಬ ಐಎಎಸ್ ಅಧಿಕಾರಿಗಳನ್ನು ಆಯುಕ್ತರನ್ನಾಗಿ ನೇಮಕ ಮಾಡುವ ಸಾಧ್ಯತೆಗಳಿವೆ. 125 ರಿಂದ 150 ವಾರ್ಡ್‌ಗಳನ್ನು ಒಳಗೊಂಡ ಮೂರು ಪಾಲಿಕೆಗಳನ್ನು ರಚನೆ ಮಾಡಿ ಚುನಾವಣೆ ನಡೆಸುವುದು ಸರ್ಕಾರದ ಉದ್ದೇಶವಾಗಿದೆ. ಈ ಪಾಲಿಕೆಗಳಿಗೆ ಜನಪ್ರತಿನಿಧಿಗಳು ಆಯ್ಕೆಯಾದರೂ ಅವರು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳುವ ಯಾವುದೇ ಯೋಜನೆಗಳಿಗೆ ಜಿಬಿಎ ಅನುಮತಿ ಪಡೆದುಕೊಳ್ಳುವುದು ಅನಿವಾರ್ಯವಾಗಲಿದೆ.