ಮಂಗಳೂರು:- ಶನಿವಾರ ಮಧ್ಯಾಹ್ನದಿಂದ ನಿರಂತರವಾಗಿ ಸುರಿದ ಪರಿಣಾಮ ಮಂಗಳೂರಿನ ಪಂಪ್ವೆಲ್ ವೃತ್ತ, ಪಡೀಲ್ ರೈಲ್ವೇ ಕೆಳ ಸೇತುವೆ ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕಳೆದ ಸುಮಾರು ಒಂದು ತಾಸಿನಿಂದ ಈ ರಸ್ತೆಗಳಲ್ಲಿ ವಾಹನಗಸರಾಗ ಸಂಚಾರಕ್ಕೆ ಸಾಧ್ಯವಾಗದೆ ವಾಹನ ದಟ್ಟಣೆ ಉಂಟಾಗಿದೆ.
ಈ ನಡುವೆ ಎಕ್ಕೂರು, ಜಪ್ಪಿನಮೊಗರುವಿನ ರಾಜಕಾಲುವೆಯೂ ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲಿನ ಮನೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ. ಭಾರೀ ಮಳೆಯಿಂದಾಗಿ ರಸ್ತೆಗಳಲ್ಲೇ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಚಂಡಮಾರುತ ಪ್ರಸರಣ, ವಾಯುಭಾರ ಕುಸಿತದ ಪ್ರಭಾವಗಳಿಂದ ಕಳೆದ ಐದಾರು ದಿನಗಳಿಂದ ಕರ್ನಾಟಕದ ನಾನಾ ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗುತ್ತಿದೆ. ಕರಾವಳಿ ಹಾಗೂ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಭಾಗದಲ್ಲಿ ರಣಭೀಕರ ಮಳೆಗೆ ಪ್ರವಾಹ ಸ್ಥಿತಿ ಉಂಟಾಗಿದೆ. ಮುನ್ಸೂಚನೆ ನೋಡಿದರೆ ಈ ಪ್ರವಾಹ ಸ್ಥಿತಿ ಇನ್ನು ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ. ಏಕೆಂದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಣಭೀಕರ ಮಳೆ ಮೂರು ದಿನ ಮುಂದುವರಿಯಲಿದೆ. ನಂತರ ಎರಡು ದಿನ ಸಾಧಾರಣವಾಗಿ ಸುರಿಯಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗೆ ಮೂರು ದಿನ ಹಾಗೂ ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ರಣಭೀಕರ ಮಳೆ ಪ್ರಯುಕ್ತ ಐಎಂಡಿ ಎರಡು ದಿನ ‘ರೆಡ್ ಅಲರ್ಟ್’ ನೀಡಲಾಗಿದೆ. ಉಳಿದಂತೆ ಇಂದಿನಿಂದ ಮುಂದಿನ 48 ಗಂಟೆಗಳಲ್ಲಿ ಬೆಳಗಾವಿ, ಧಾರವಾಡ, ಹಾವೇರಿ, ಹಾಸನ ಜಿಲ್ಲೆಗಳಿಗೆ ಎರಡು ದಿನ, ಮೈಸೂರಿಗೆ ಒಂದು ದಿನ ಭಾರೀ ಮಳೆ ಹಿನ್ನೆಲೆ ‘ಆರೆಂಜ್ ಅಲರ್ಟ್’ ಘೋಷಣೆ ಆಗಿದೆ ಎಂದು ಐಎಂಡಿ ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
