ಬೆಂಗಳೂರು

ಪೂರ್ವ ತಾಲೀಮು ನಡೆಸುತ್ತಿರುವ ಕಾಂಗ್ರೆಸ್ ಬಣ

ಬೆಂಗಳೂರು:- ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ, ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆ ಸೃಷ್ಟಿಯೊಂದಿಗೆ ಸಚಿವ ಸಂಪುಟ ಪುನಾರಚನೆ, ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನೂತನ ಸದಸ್ಯರ ನೇಮಕ ವಿಚಾರವೂ ಸೇರಿದಂತೆ ರಾಜ್ಯ ಕಾಂಗ್ರೆಸ್ ನಲ್ಲಿನ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಕಾಂಗ್ರೆಸ್ ಹೈಕಮಾಂಡ್ ಗೆ ಸಾಧ್ಯವಾಗುತ್ತಿಲ್ಲ.

ಸಚಿವ ಸಂಪುಟ ಪುನಾರಚನೆಯೂ ಸೇರಿದಂತೆ ಕೆಲವೊಂದು ನಿರ್ದಿಷ್ಟಕಾರ್ಯ ಸೂಚಿಗಳನ್ನು ಮುಂದಿಟ್ಟುಕೊಂಡು ಕೆಲ ದಿನಗಳ ಹಿಂದೆ ದಿಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್, ಸೋನಿಯಾ ಗಾಂಧಿ ಸೇರಿದಂತೆ ಯಾರಿಂದಲೂ ಸ್ಪಷ್ಟ ಭರವಸೆಯಾಗಲೀ ಉತ್ತರವಾಗಲೀ ಸಿಕ್ಕಿಲ್ಲ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ವರಿಷ್ಠರು ಸದ್ಯಕ್ಕೆ ಬೇಡ, ಕಾದು ನೋಡೋಣ ಎಂಬ ಸಮಾಧಾನಕರ ಉತ್ತರ ನೀಡಿದ್ದು ವಿಧಾನ ಪರಿಷತ್ತಿನ ನಾಲ್ಕು ಖಾಲಿ ಸ್ಥಾನಗಳಿಗೆ ನೂತನ ಸದಸ್ಯರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ನೀಡಿದ್ದ ಪಟ್ಟಿಯನ್ನು ತಮ್ಮಲ್ಲೇ ಇರಿಸಿಕೊಂಡಿದ್ದು ಹಿರಿಯ ಸಚಿವರು ಹಾಗೂ ಕೆಪಿಸಿಸಿ ಅಧ್ಯಕ್ಷರ ಸಹಮತ ಪಡೆದು ಒಮ್ಮತದ ನಿರ್ಧಾರಕ್ಕೆ ಬಂದು ಇನ್ನೊಂದು ಪಟ್ಟಿಯನ್ನು ಸಿದ್ಧ ಮಾಡಿ ಕಳಿಸುವಂತೆ ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪಡಸಾಲೆಯಲ್ಲಿ ಗುಸುಗುಸು.

ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯ ಮೂಲಕ ಪಕ್ಷದ ಮೇಲೆ ತಮ್ಮದೇ ಹಿಡಿತ ಸಾಧಿಸುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮೂಲೆಗೊತ್ತುವ ಸಿದ್ದರಾಮಯ್ಯ ತಂತ್ರ ಫಲ ನೀಡಿಲ್ಲ. ಈ ತಿಂಗಳಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರ್ಣ. ಇದರ ಜೊತೆಗೆ ಜಿಲ್ಲಾ, ತಾಲ್ಲೂಕು ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ತಯಾರಿ ನಡೆಸಿದೆ. ಈ ವಿಷಯ ಮನಗಂಡಿರುವ ದಿಲ್ಲಿ ಕಾಂಗ್ರೆಸ್ ವರಿಷ್ಠರು ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಬೇಡ, ಸಚಿವ ಸಂಪುಟ ಪುನಾರಚನೆಯೂ ಬೇಡ ಮುಂದೆ ನೋಡೋಣ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ತಮ್ಮ ಕಾರ್ಯ ಸೂಚಿಗಳ ಪೈಕಿ ಯಾವುದಕ್ಕೂ ಹೈಕಮಾಂಡ್ ಸ್ಪಷ್ಟ ಉತ್ತರ ನೀಡದೇ ಸಮ್ಮತಿಯನ್ನೂ ನೀಡದೇ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ನಿಲುವು ತಳೆದಿರುವುದರ ಬಗ್ಗೆ ಸಿದ್ದರಾಮಯ್ಯ ಅಸಹನೆಗೊಂಡಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ವರಿಷ್ಠರನ್ನು ಕಡೆಗಣಿಸಿ ಯಾವುದೇ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ಅವರೂ ಇಲ್ಲ. ಈ ಬೆಳವಣಿಗೆಗಳು ಒಂದು ಕಡೆಯಾದರೆ ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ನಾಯಕ ರಾಹುಲ್ ಗಾಂಧಿ, ಅಧಿನಾಯಕಿ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿ ಈ ಹಿಂದೆ ಸರ್ಕಾರ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಆದ ಆಂತರಿಕ ಒಪ್ಪಂದದಂತೆ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಸ್ತಾಂತರ ಆಗಬೇಕು ಅದಾಗುವ ತನಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕೈಬಿಡಬೇಕು. ಯಾವುದೇ ಕಾರಣಕ್ಕೂ ತಾನು ಕೆಪಿಸಿಸಿ ಅಧ್ಯಕ್ಷರ ಹುದ್ದೆಯನ್ನು ತ್ಯಜಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿ ಬಂದಿದ್ದಾರೆ ಎಂದು ದೆಹಲಿ ಕಚೇರಿಯ ಕಾರ್ನರ್ ಟಾಕ್.

ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ನಡೆಯುತ್ತಿರುವ ಆಂತರಿಕ ಸಮರ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಎಂಥದೇ ಸಂದರ್ಭ ಎದುರಾದರೂ ಮುಖ್ಯಮಂತ್ರಿ ಸ್ಥಾನ ತ್ಯಜಿಸುವ ಮಾತೇ ಇಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಸಿದ್ದರಾಮಯ್ಯ ಅದಕ್ಕಾಗಿ ರಣತಂತ್ರಗಳನ್ನು ಹೆಣೆಯುತ್ತಿದ್ದಾರೆ.

ಒಂದು ಮೂಲದ ಪ್ರಕಾರ ಹಿಂದುಳಿದ ವರ್ಗಕ್ಕೆ ಸೇರಿದ ಸಣ್ಣಸಣ್ಣ ಜಾತಿಗಳಿಗೆ ವಿಧಾನ ಪರಿಷತ್ ಸದಸ್ಯತ್ವದ ಪ್ರಾತಿನಿಧ್ಯ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಆದರೆ, ಶಿವಕುಮಾರ್ ಪಕ್ಷದ ಸಂಘಟನೆಗೆ ದುಡಿದವರಿಗೆ ಆಧ್ಯತೆ ನೀಡಲು ಒತ್ತಾಯಿಸಿದ್ದಾರೆ. ಇದೀಗ ಈ ವಿವಾದವೂ ಹೈಕಮಾಂಡ್ ಅಂಗಳಕ್ಕೆ ಮುಟ್ಟಿದೆ.

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹುದ್ದೆಯ ಅಧಿಕಾರ ಹಂಚಿಕೆ ಮುಂದಿನ ದಿನಗಳಲ್ಲಿ ದೊಡ್ಡ ವಿವಾದವಾಗಿ ಬಹಿರಂಗ ಯುದ್ಧವಾಗಿ ಮಾರ್ಪಟ್ಟರೂ ಆಶ್ಚರ್ಯ ಪಡಬೇಕಿಲ್ಲ. ಅಂತಹ ಸನ್ನಿವೇಶಕ್ಕೆ ಈಗ ನಡೆಯುತ್ತಿರುವ ವಿದ್ಯಮಾನಗಳು ಒಂದು ಪೂರ್ವ ತಾಲೀಮು ಅಷ್ಟೆ.