ಬೆಂಗಳೂರು

ಪೊಲೀಸರ ಸಲಹೆ ಧಿಕ್ಕರಿಸಿ ತಕ್ಷಣದ ಸಂಭ್ರಮಾಚರಣೆ.!?

ಬೆಂಗಳೂರು:- ಪೊಲೀಸರ ಸಲಹೆ ಧಿಕ್ಕರಿಸಿ ತಕ್ಷಣದ ಸಂಭ್ರಮಾಚರಣೆ ಮಾಡಿದ್ದೇ ಘಟನೆಗೆ ಪ್ರಮುಖ ಕಾರಣವಾಯಿತು ತಿಳಿದು ಬಂದಿದೆ. ತಕ್ಷಣವೇ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸುವ ಬದಲು ಒಂದು ವಾರದ ನಂತರ ಮಾಡುವಂತೆ ಸಲಹೆ ನೀಡಲಾಗಿತ್ತು. ಆದರೆ, ಅದನ್ನು ಕಡೆಗಣಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಬೇಸರ ವ್ಯಕ್ತಪಡಿಸಿರುವುದಾಗಿ ಪತ್ರಿಕಾ ವರದಿಯೊಂದು ಉಲ್ಲೇಖಿಸಿದೆ.

ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಗೆಲುವಿಗೆ ಸಂಬಂಧಿಸಿ ಬುಧವಾರ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಮಂಗಳವಾರ ರಾತ್ರಿಯಿಂದಲೇ ಸರ್ಕಾರ ಮತ್ತು ಫ್ರಾಂಚೈಸಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದೆವು. ಜನರ ಭಾವನೆ, ಉದ್ವೇಗ ತುಸು ತಣ್ಣಗಾದ ನಂತರ ಕಾರ್ಯಕ್ರಮ ಆಯೋಜಿಸುವುದು ಸೂಕ್ತ ಎಂಬ ಸಲಹೆ ನೀಡಿದ್ದೆವು. ಮುಂದಿನ ಭಾನುವಾರ ಕಾರ್ಯಕ್ರಮ ಆಯೋಜಿಸಲು ಶಿಫಾರಸು ಮಾಡಿದ್ದೆವು ಎಂದು ಬೆಳವಣಿಗೆಗಳ ಬಗ್ಗೆ ಮಾಹಿತಿಯುಳ್ಳ ಉನ್ನತ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಆರಂಭಿಕ ಯೋಜನೆಯ ಪ್ರಕಾರ, ಆಟಗಾರರನ್ನು ವಿಧಾನಸೌಧದಿಂದ ಬಾಳೇಕುಂದ್ರಿ ವೃತ್ತಕ್ಕೆ ಮೆರವಣಿಗೆ ಮೂಲಕ ಕರೆತರಲು ಉದ್ದೇಶಿಸಲಾಗಿತ್ತು. ನಂತರ ಕಬ್ಬನ್ ರಸ್ತೆ, ಎಂಜಿ ರಸ್ತೆ ಮತ್ತು ಅಂತಿಮವಾಗಿ ಕ್ವೀನ್ಸ್ ವೃತ್ತದ ಬಳಿಯ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಮೆರವಣಿಗೆ ಮೂಲಕ ಕರೆದೊಯ್ಯುವುದು ಎಂದು ಹೇಳಲಾಗಿತ್ತು. ಆದರೆ, ಯಾವುದೇ ಮೆರವಣಿಗೆಯನ್ನು ನಡೆಸಬೇಡಿ ಎಂದು ನಾವು ಮನವಿ ಮಾಡಿದ್ದೆವು. ಒಂದೇ ಸ್ಥಳದಲ್ಲಿ ಸಂಘಟಿತ ರೀತಿಯಲ್ಲಿ ಕಾರ್ಯಕ್ರಮ ನಡೆಸುವಂತೆ ಹೇಳಿದ್ದೆವು. ಆಟಗಾರರನ್ನು ಕ್ರೀಡಾಂಗಣಕ್ಕೆ ಕರೆತಂದು ಅಲ್ಲಿಯೇ ಕಾರ್ಯಕ್ರಮ ಮುಗಿಸುವಂತೆ ಸಲಹೆ ನೀಡಿದ್ದೆವು ಎಂದು ಪೊಲೀಸ್ ಅಧಿಕಾರಿ ಹೇಳಿರುವುದಾಗಿ ವಿಶ್ವಾಸಾರ್ಹ ಮೂಲ ತಿಳಿಸಿದೆ.

ಪೊಲೀಸ್ ಅಧಿಕಾರಿಗಳ ಸಲಹೆ ನಂತರವೂ ಸರ್ಕಾರ ಮತ್ತು ಆರ್ಸಿಬಿ ಆಡಳಿತ ಮಂಡಳಿ ಬುಧವಾರವೇ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಲು ಮುಂದಾಗಿ ಆಟಗಾರರು, ವಿಶೇಷವಾಗಿ ವಿದೇಶಿ ಆಟಗಾರರು ಇಂದು ಅಥವಾ ನಾಳೆ ಹೊರಡುತ್ತಾರೆ ಎಂಬುದು ಅವರ ವಾದವಾಗಿತ್ತು. ಸಾಮಾನ್ಯವಾಗಿ, ಸರ್ಕಾರವು ಇಂಥ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಬಯಸುತ್ತದೆ. ಒಂದು ವೇಳೆ ಸಂಭ್ರಮಾಚರಣೆಗೆ ಸರ್ಕಾರ ನಿರಾಕರಿಸಿದ್ದರೆ, ಅದು ಮತ್ತೊಂದು ರೀತಿಯ ಅವ್ಯವಸ್ಥೆಗೆ ಕಾರಣವಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿರುವುದನ್ನು ವರದಿಯಾಗಿದೆ.