Uncategorized ಬೆಂಗಳೂರು

ಪೋಷಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು.- ಶಿಕ್ಷಣ ಇಲಾಖೆ

ಬೆಂಗಳೂರು:- ಶಾಲಾ ಮಕ್ಕಳ ಬೇಸಗೆ ರಜೆ ಮೇ 28 2025ಕ್ಕೆ ಮುಕ್ತಾಯ ಆಗಲಿದ್ದು, ಮೇ 29ರಿಂದ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭ ಆಗಲಿದೆ. ಆದರೆ, ಇದೀಗ ಬೇಸಿಗೆ ರಜೆ ವಿಸ್ತರಣೆ ಆಗಿದೆ ಎಂಬ ಸುಳ್ಳು ಸಂದೇಶಗಳನ್ನು ಹರಡುತ್ತಿದ್ದು, ಇದು ಪೋಷಕರಲ್ಲಿ ಗೊಂದಲ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸವನ್ನು ಮಾಡಿದೆ.

ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದೇಶದ ಹಲವು ಭಾಗಗಳಲ್ಲಿ ಶಾಲೆಯ ಬೇಸಿಗೆ ರಜೆಯನ್ನು ಜುಲೈವರೆಗೂ ವಿಸ್ತರಣೆ ಮಾಡಲಾಗಿದೆ. ಆದರೆ, ಇದು ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯೊಂದು ಹರಡಿದ್ದು, ಇದಕ್ಕೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಸ್ಪಷ್ಟನೆ ಕೊಡುವ ಕೆಲಸವನ್ನು ಮಾಡಿದೆ.

ಶಿಕ್ಷಣ ಇಲಾಖೆಯ ರಾಜ್ಯ ಪಠ್ಯಕ್ರಮ, ಸಿಬಿಎಸ್‌ಇ, ಐಸಿಎಸ್‌ಇ ಹೀಗೆ ಎಲ್ಲಾ ಬೋರ್ಡ್‌ಗಳ ಸರ್ಕಾರಿ, ಖಾಸಗಿ ಶಾಲೆಗೆ ಅನ್ವಯವಾಗುತ್ತದೆ ಎಂಬ ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲ ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ. ಶಿಕ್ಷಕರು, ಪಾಲಕ, ಪೋಷಕರ ವಾಟ್ಸ್‌ ಆಯಪ್‌ ಗ್ರೂಪ್‌ಗಲ್ಲೂ ಈ ಸಂದೇಶ ಹರಿದಾಡುತ್ತಿದೆ. ಆದರೆ, ರಾಜ್ಯದಲ್ಲಿ ಬೇಸಿಗೆ ರಜಾ ಅವಧಿಯಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ನಿಗದಿಯಂತೆ ಇದೇ ಮೇ 29ರಿಂದಲೇ ಶೈಕ್ಷಣಿಕ ವರ್ಷ ಅರಂಭ ಆಗಲಿದೆ ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಈಗಾಗಲೇ ಶೈಕ್ಷಣಿಕ ವರ್ಷದ ಆರಂಭದ ಕುರಿತು ಅಧಿಸೂಚನೆಯನ್ನು ಕೂಡ ಬಿಡುಗಡೆ ಮಾಡಿತ್ತು. ವೇಳಾಪಟ್ಟಿ ಈಗಾಗಲೇ ಬಿಡುಗಡೆ ಆಗಿದ್ದು, ಅದರಂತೆಯೇ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಶೈಕ್ಷಣಿಕ ಚಟುವಟಿಕೆ ಮುಂದುವರೆಯಲಿದೆ. ವಿದ್ಯಾರ್ಥಿಗಳು, ಪೋಷಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ಗಳು ತಮ್ಮದೇ ವೇಳಪಟ್ಟಿಯನ್ನು ಹೊಂದಿವೆ ಎಂದು ತಿಳಿಸಿದೆ.

ವೇಳಾಪಟ್ಟಿ ಪ್ರಕಾರ, 2025-26ನೇ ಶೈಕ್ಷಣಿಕ ವರ್ಷ ಮೇ 29ರಿಂದ 2026ರ ಏಪ್ರಿಲ್‌ವರೆಗೂ ಇರಲಿದೆ. ವರ್ಷದ 365 ದಿನಗಳಲ್ಲಿ ಮಧ್ಯವಧಿ/ದಸರಾ ರಜೆ, ಬೇಸಗೆ ರಜೆ ಸಹಿತ 123 ರಜಾ ದಿನಗಳು ಹಾಗೂ 242 ಶಾಲಾ ಚಟುವಟಿಕೆಯ ದಿನಗಳು ಇರಲಿವೆ. ಈ ಪ್ರಕಾರವೇ ಮೇ 29ರಂದು ಶಾಲೆಗಳು ಆರಂಭವಾಗಲಿದೆ. ಮುಖ್ಯಶಿಕ್ಷಕರು, ಶಿಕ್ಷಕರು ಆ ದಿನದಂದು ಶಾಲೆಗಳಲ್ಲಿ ಹಾಜರಿರಬೇಕು. ಅಲ್ಲದೆ, ಮೇ 30ರಂದು ಶಾಲಾರಂಭೋತ್ಸವ ನಡೆಸಬೇಕು. ಜೂನ್‌ ಮೊದಲ ವಾರದಲ್ಲಿ ಸರ್ಕಾರಿ ಶಾಲಾ ದಾಖಲಾತಿ ಕುರಿತು ದಾಖಲಾತಿ ಆಂದೋಲನ ನಡೆಸಿ ಮನೆ ಮನೆ ಭೇಟಿ ನೀಡಿ, ಶಾಲೆಗೆ ಸೇರದ ಅಥವಾ ಅರ್ಧಕ್ಕೆ ಶಾಲೆ ಬಿಟ್ಟಿರುವ ಮಕ್ಕಳಿದ್ದರೆ ಅವರನ್ನು ದಾಖಲಿಸಿಕೊಳ್ಳುವ ಕಾರ್ಯ ಆಗಬೇಕೆಂದು ಶಾಲೆಗಳಿಗೆ ಶಿಕ್ಷಣೆ ಇಲಾಖೆ  ಸೂಚನೆ ನೀಡಿದೆ.