ಬೆಂಗಳೂರು:- ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿ ಪೌರ ಕಾರ್ಮಿಕರ ಮುಖದಲ್ಲಿ ಮಂದಹಾಸ ನಿರ್ಮಾಣವಾಗಿತ್ತು.12,692 ಮಂದಿ ಪೌರ ಕಾರ್ಮಿಕರಿಗೆ ಸೇವೆ ಖಾಯಂ ನೇಮಕಾತಿ ಪತ್ರ ವಿತರಣೆ ಮಾಡಿದರು.
ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಪೌರ ಕಾರ್ಮಿಕರು ಪ್ರಸ್ತುತ ಖಾಯಂ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಸುಮಾರು 9000 ಸಂಖ್ಯೆಯಷ್ಟಿರಬಹುದಾದ ವಾಹನ ಚಾಲಕರು, ಸಹಾಯಕರು ಹಾಗೂ ಆಪರೇಟರ್ಸ್ ಗಳನ್ನೂ ಕೂಡ ಖಾಯಂ ಮಾಡಲಾಗುವುದು. ಶುಚಿತ್ವದ ಕಾಯಕದಲ್ಲಿ ತೊಡಗಿರುವವರನ್ನು ಖಾಯಂ ನೇಮಕಾತಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ ಪೌರ ಕಾರ್ಮಿಕರ ಬಹುದಿನಗಳ ಬೇಡಿಕೆಯಾಗಿದ್ದ ಖಾಯಂ ನೇಮಕಾತಿಯನ್ನು ಬೆಂಬಲಿಸಿ, ಆಗಿನ ಸರ್ಕಾರ ಖಾಯಂ ನೇಮಕಾತಿ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪೌರ ಕಾರ್ಮಿಕರ ಈ ಬೇಡಿಕೆಯನ್ನು ಪೂರೈಸುವುದಾಗಿ ನೀಡಲಾಗಿದ್ದ ಭರವಸೆಯನ್ನು ಇಂದು ಈಡೇರಿಸಲಾಗಿದೆ. ಇದರಿಂದ 4ನೇ ದರ್ಜೆಯ ಪೌರ ಕಾರ್ಮಿಕನ ವೇತನ, ಅವರ ಖಾತೆಗೆ ನೇರವಾಗಿ 39000 ರೂ.ಗಳು ಪಾವತಿಯಾಗಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.
1000 ಪೌರ ಕಾರ್ಮಿಕರನ್ನು ವಿದೇಶಕ್ಕೆ ಕಳಿಸುವ ಯೋಜನೆ ಸೇರಿದಂತೆ ಹಲವಾರು ಕಲ್ಯಾಣ ಯೋಜನೆಗಳನ್ನು ಪೌರ ಕಾರ್ಮಿಕರಿಗಾಗಿ ಹಮ್ಮಿಕೊಳ್ಳಲಾಗಿದೆ. ಪೌರ ಕಾರ್ಮಿಕರು , ಅವರ ಕುಟುಂಬದವರೂ ಮುಖ್ಯವಾಹಿನಿಗೆ ಬರಬೇಕು, ತನ್ಮೂಲಕ ಸಮ ಸಮಾಜವನ್ನು ನಿರ್ಮಿಸುವ ಉದ್ದೇಶ ಸರ್ಕಾರದ್ದಾಗಿದೆ. ರಾಜ್ಯದ ಎಲ್ಲ ವರ್ಗದ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಾನತೆ ದೊರೆಯುವಂತಾಗಬೇಕು. ಪೌರ ಕಾರ್ಮಿಕ ವರ್ಗದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ಕೋರಿದರು.