ಚಿಕ್ಕಮಗಳೂರು:- ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಲ್ಲೆಯ ನರಸಿಂಹರಾಜಪುರದ ಪಟ್ಟಣ ಪಂಚಾಯಿತಿಯ ಪೌರ ನೌಕರರ ಮುಷ್ಕರವು 4ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಪಟ್ಟಣ ಪಂಚಾಯಿತಿ ಮುಂಭಾಗ ಬೇಡಿಕೆ ಈಡೇರಿಸಬೇಕೆಂದು ಘೋಷಣೆ ಕೂಗುತ್ತಾ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಬೆಂಬಲ ಸೂಚಿಸಿ ಮಾತನಾಡಿ, ಪೌರ ಕಾರ್ಮಿಕರ ಬೇಡಿಕೆಗಳನ್ನು ರಾಜ್ಯ ಸರ್ಕಾರವು ಈಡೇರಿಸಬೇಕಾಗಿದೆ. ಆದರೆ, ಶಾಸಕರ ವ್ಯಾಪ್ತಿಯಲ್ಲಿ ಪೌರ ನೌಕರರಿಗೆ ನೀಡಬೇಕಾದ ಸೌಲಭ್ಯಗಳನ್ನು ತಕ್ಷಣ ನೀಡಲು ಕ್ರಮ ತೆಗೆದುಕೊಳ್ಳಬೇಕು. ಪೌರ ಕಾರ್ಮಿಕರಿಗೆ ಸವಲತ್ತುಗಳನ್ನು ನೀಡಬೇಕು, ಪೌರ ನೌಕರರ ಚಳವಳಿಗೆ ಬಿಜೆಪಿ ಬೆಂಬಲಿಸಲಿದೆ. ನಿಮ್ಮ ಮನವಿಯನ್ನು ವಿರೋಧ ಪಕ್ಷದ ನಾಯಕ ಅಶೋಕ್ ಅವರಿಗೆ ತಲುಪಿಸುತ್ತೇವೆ. ಅವರು ಪೌರ ನೌಕರರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದರು.
ಪೌರ ಕಾರ್ಮಿಕರ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಮಾತನಾಡಿ, ರಾಜ್ಯಾದ್ಯಂತ ಮೇ 27 ರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಆಶ್ವಾಸನೆ ಮಾತ್ರ ನೀಡುತ್ತಿದೆ. ಆದರೆ, ಬೇಡಿಕೆ ಈಡೇರಿಸಲಿಲ್ಲ, ಸಿಎಂ ಸಿದ್ದರಾಮಯ್ಯನವರ ಸರ್ಕಾರ 2 ಬಾರಿ ಪೌರ ಕಾರ್ಮಿಕರನ್ನು ಖಾಯಂ ಗೊಳಿಸಿದೆ. ಆದರೆ, ಹೊರ ಗುತ್ತಿಗೆ ನೌಕರರಾದ ವಾಟರ್ ಮ್ಯಾನ್, ಡಾಟಾ ಆಪರೇಟರ್, ಟ್ರಾಕ್ಟರ್ ಚಾಲಕರು, ಲೋಡರ್ಸ್ ಗಳನ್ನು ಖಾಯಂಗೊಳಿಸಿಲ್ಲ. ಸರ್ಕಾರದಿಂದ ನಮಗೆ ನೇರವಾಗಿ ಸಂಬಳ ನೀಡಬೇಕು. ಈಗ ಗುತ್ತಿಗೆದಾರರ ಮೂಲಕ ಸಂಬಳ ನೀಡಲಾಗುತ್ತಿದೆ. ಕಳೆದ 4 ದಿನದಿಂದ ಮುಷ್ಕರ ಮಾಡುತ್ತಿದ್ದರೂ ಮಾನವೀಯತೆಯಿಂದ ಸ್ವಲ್ಪ ಕೆಲಸ ಮಾಡಿದ್ದೇವೆ. ಆದರೆ, ನಮ್ಮ ಬೇಡಿಕೆ ಈಡೇರದಿದ್ದರೆ ಶನಿವಾರದಿಂದ ನೀರು ಬಿಡುವುದನ್ನು ನಿಲ್ಲಿಸುತ್ತೇವೆ. ರಸ್ತೆ ಕ್ಲೀನ್ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಆಶೀಶ್ ಕುಮಾರ್ ಹಾಗೂ ಬಿಜೆಪಿ ಪಕ್ಷದ ಇತರ ಮುಖಂಡರು ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಪೌರ ನೌಕರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ಸೂಚಿಸಿದರು. ವಾಲ್ಮೀಕಿ ಸಂಘದ ಕ್ಷೇತ್ರ ಅಧ್ಯಕ್ಷ ಶ್ರೀನಿವಾಸ್ ಭೇಟಿ ನೀಡಿ ಬೆಂಬಲ ಸೂಚಿಸಿದರು. ಪ್ರತಿಭಟನೆಯಲ್ಲಿ ಪೌರ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ವಿಜಯಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಹರೀಶ್, ಇತರ ಪದಾಧಿಕಾರಿಗಳು ಸೇರಿದಂತೆ ಪಟ್ಟಣ ಪಂಚಾಯಿತಿಯ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಸುರಭಿ ರಾಜೇಂದ್ರ, ಪಟ್ಟಣ ಪಂಚಾಯಿತಿ ಸದಸ್ಯರಾದ ರೇಖಾ, ರೀನಾ, ಬಿಜೆಪಿ ಮುಖಂಡರಾದ ಪರ್ವೀಜ್, ಶೇಖರ್, ಮಂಜುನಾಥ್ ಲಾಡ್, ವೈ.ಎಸ್.ರವಿ, ಜಪ್ರುಲ್ಲಾ ಖಾನ್, ಎಂ.ಪಿ.ಸನ್ನಿ ಮತ್ತಿತರರು ಇದ್ದರು.