ಬೆಂಗಳೂರು

ಬಕ್ರೀದ್‌ ಪ್ರಾರ್ಥನೆಯಲ್ಲಿ ಭಾಗವಹಿಸದೇ ದೂರ ಉಳಿದ ಸಿಎಂ

ಬೆಂಗಳೂರು:- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಕ್ರೀದ್‌ ಪ್ರಾರ್ಥನೆಯಲ್ಲಿ ಭಾಗವಹಿಸದೇ ಮನೆಯಲ್ಲೇ ಉಳಿದಿದ್ದರು.

ಸಾಮಾನ್ಯವಾಗಿ ಬಕ್ರೀದ್‌, ರಂಜಾನ್‌ ಹಬ್ಬಗಳಲ್ಲಿ ಸಿಎಂ ಚಾಮರಾಜ ಪೇಟೆಯ ಈದ್ಗಾ ಮೈದಾನದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸುವುದು ವಾಡಿಕೆಯಾಗಿತ್ತು. ಮುಖ್ಯಮಂತ್ರಿಯಾದಾಗಿನಿಂದಲೂ ಎಂತಹ ಸಂದರ್ಭದಲ್ಲೂ ಪ್ರಾರ್ಥನೆಯಿಂದ ದೂರ ಉಳಿದಿರಲಿಲ್ಲ.

ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಕೂಡ ಪ್ರಾರ್ಥನೆಯಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭ ಹಾರೈಸುತ್ತಿದ್ದರು. ಆದರೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣ ಇಡೀ ಸರ್ಕಾರವನ್ನೇ ಭಾರೀ ಮುಜುಗರಕ್ಕೀಡು ಮಾಡಿದೆ.

ಸಿದ್ದರಾಮಯ್ಯನವರಂತೂ ಕಳೆದ ಮೂರು ದಿನಗಳಿಂದಲೂ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ. ಸಂಪುಟ ಸಭೆಯಲ್ಲಂತೂ ಅತೀವವಾದ ದುಃಖ ತೋಡಿಕೊಂಡರೆಂದು ಹೇಳಲಾಗಿದೆ. ಸಚಿವ ಜಮೀರ್‌ ಅಹಮದ್‌ ಖಾನ್‌ ಪ್ರತೀ ಹಬ್ಬದ ಸಂದರ್ಭದಲ್ಲೂ ಮುಖ್ಯಮಂತ್ರಿಯಾದವರನ್ನು ಈದ್ಗಾ ಮೈದಾನಕ್ಕೆ ಕರೆದುಕೊಂಡು ಪ್ರಾರ್ಥನೆಯೊಂದಿಗೆ ಭಾವಹಿಸುವಂತೆ ಮಾಡುವುದು ಸಾಮಾನ್ಯ.

ಈ ಹಿಂದೆ ಜಾತ್ಯತೀತ ಜನತಾದಳದಲ್ಲಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಈದ್ಗಾ ಮೈದಾನದಲ್ಲಿ ಭಾಗವಹಿಸಲು ಬರಲಿಲ್ಲ ಎಂಬ ಕಾರಣಕ್ಕಾಗಿಯೇ ಜಮೀರ್‌ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿ ವಿವಾದ ಸೃಷ್ಟಿಸಿದ್ದರು. ಅಲ್ಲಿಂದ ಕುಮಾರಸ್ವಾಮಿ ಹಾಗೂ ಜಮೀರ್‌ ಅಹಮದ್‌ ಖಾನ್‌ ಅವರ ಸಂಬಂಧ ಹಳಸಿದ್ದು ಬಹಿರಂಗವಾಗಿ ಕಾಣತೊಡಗಿತ್ತು.

ಈಗ ಸಿದ್ದರಾಮಯ್ಯನವರನ್ನು ಸಾಮೂಹಿಕ ಪ್ರಾರ್ಥನೆಗೆ ಕರೆದುಕೊಂಡು ಹೋಗಲು ಜಮೀರ್‌ ಪ್ರಯತ್ನಿಸಿದ್ದರು ಎಂದು ಹೇಳಲಾಗಿದೆ. ಆದರೆ, ಎಲ್ಲೂ ಬರುವುದಿಲ್ಲ ಎಂದು ಹೇಳಿರುವ ಸಿದ್ದರಾಮಯ್ಯ ಮನೆಯಲ್ಲೇ ಉಳಿದಿದ್ದರು ಎಂದು ಹೇಳಲಾಗಿದೆ.