ಬೆಂಗಳೂರು

ಬಿಜೆಪಿ ಶಾಸಕರ ಅಮಾನತು ರಾಜ್ಯಪಾಲರ ಅಂಗಳಕ್ಕೆ

ಬೆಂಗಳೂರು:- ಬಿಜೆಪಿಯ 18 ಶಾಸಕರ ಅಮಾನತು ಮಾಡಿದ ನಿರ್ಧಾರವನ್ನು ವಾಪಸ್‌ ಪಡೆಯುವ ಬಗ್ಗೆ ಧನಾತ್ಮಕ ನಿರ್ಧಾರ ಕೈಗೊಳ್ಳುವಂತೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದು, ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಬೇಕೆಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಆಗುವ ಘಟನಾವಳಿಗಳಿಗೆ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಿರುವುದು ನಿಯಮಾವಳಿಗಳ ಪ್ರಕಾರ ಎಷ್ಟು ಸರಿ ಎನ್ನುವ ಚರ್ಚಗೆ ಇದು ಕಾರಣವಾಗಿದೆ. ರಾಜ್ಯಪಾಲರು ವಿಧಾನಸಭಾಧ್ಯಕ್ಷ ಹಾಗೂ ಮುಖ್ಯಮಂತ್ರಿಗಳಿಗೆ ಪ್ರತ್ಯೇಕ ಪತ್ರ ಬರೆದಿದ್ದರೂ, ವಿಧಾನ ಸಭಾಧ್ಯಕ್ಷರು ಪ್ರಮುಖವಾಗಿ ನಿರ್ಧಾರ ಕೈಗೊಳ್ಳಬೇಕಿದ್ದು, ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದ್ದು, ವಿಧಾನಸಭೆಯಲ್ಲಿ ಸದನ ನಾಯಕರೂ ಆಗಿರುವ ಮುಖ್ಯಮಂತ್ರಿ ವಿಧಾನ ಸಭಾಧ್ಯಕ್ಷರಿಗೆ ಬಿಜೆಪಿ ಶಾಸಕರ ಅಮಾನತು ನಿರ್ಧಾರ ಹಿಂಪಡೆಯಲು ಶಿಫಾರಸು ಮಾಡಬಹುದಾದರೂ, ಅಂತಿಮ ನಿರ್ಧಾರ ವಿಧಾನಸಭಾಧ್ಯಕ್ಷರದೇ ಆಗಿದೆ.

ರಾಜ್ಯಪಾಲರ ಪತ್ರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭಾಧ್ಯಕ್ಷ ಖಾದರ್‌ ಅವರು ಯಾವ ರೀತಿ ಉತ್ತರಿಸುತ್ತಾರೆ ಅಥವಾ ಕ್ರಮ ಕೈಗೊಳ್ಳುತ್ತಾರೆ ಎನ್ನುವುದರ ಮೇಲೆ ರಾಜ್ಯಪಾಲರು ಮತ್ತು ಸರ್ಕಾರದ ಶೀತಲ ಸಮರ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಕುತೂಹಲ ಮೂಡಿದೆ.

ಇತ್ತೀಚೆಗೆ ಬಿಜೆಪಿ ನಿಯೋಗು ಬಿಜೆಪಿಯ 18 ಶಾಸಕರ ಅಮಾನತು ನಿರ್ಧಾರವನ್ನು ರದ್ದು ಮಾಡುವಂತೆ ಕೋರಿ ರಾಜ್ಯಪಾಲರಿಗೆ ದೂರು ನೀಡಿತ್ತು ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿಧಾನಸಭಾಧ್ಯ್ಷ ಯು.ಟಿ. ಖಾದರ್‌ ಫರೀದ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ನಡೆದ ಬಜೆಟ್ ಅಧಿವೇಶನದ ಕೊನೆಯ ದಿನ ಹನಿಟ್ರ್ಯಾಪ್ ಪ್ರಕರಣ ಹಾಗೂ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡುವ ವಿಚಾರದ ಮೇಲಿನ ಚರ್ಚೆ ಗದ್ದಲ ಸೃಷ್ಟಿಸಿತ್ತು. ಬಿಜೆಪಿ ಶಾಸಕರು ಸಭಾಧ್ಯಕ್ಷರ ಪೀಠದ ಎದುರು ಜಮಾಯಿಸಿ, ಹಾಳೆಗಳನ್ನು ಸ್ಪೀಕರ್ ಮೇಲೆ ಎಸೆದಿದ್ದರು. ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಬಿಜೆಪಿಯ 18 ಮಂದಿ ಶಾಸಕರನ್ನು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಆರು ತಿಂಗಳ ಕಾಲ ಅಮಾನತು ಮಾಡಿದ್ದರು. ಶಾಸಕರ ಅಮಾನತು ನಿರ್ಧಾರ ಹಿಂಪಡೆಯುವಂತೆ ಬಿಜೆಪಿ ನಾಯಕರು ವಿಧಾನಸಭಾಧ್ಯಕ್ಷರನ್ನು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಪೀಕರ್ ಯು.ಟಿ.ಖಾದರ್ ಅವರು, ಶಾಸಕರ ಅಮಾನತು ನನ್ನೊಬ್ಬನ ನಿರ್ಧಾರವಲ್ಲ ಎಂದು ಹೇಳಿ ಅಮಾನತು ಆದೇಶ ವಾಪಾಸ್‌ ಪಡೆಯಲು ನಿರಾಕರಿಸಿದ್ದರು. ಇದರಿಂದ ಅಸಮಾಧಾನಗೊಂಡ ಬಿಜೆಪಿ ನಾಯಕರು ಸೋಮವಾರ ರಾಜ್ಯಪಾಲರನ್ನು ಭೇಟಿ ಮಾಡಿ ಶಾಸಕರ ಅಮಾನತು ನಿರ್ಧಾರ ರದ್ಧುಪಡಿಸುವಂತೆ ಮನವಿ ಮಾಡಿದ್ದರು.

ಮಾ.21ರಂದು ವಿಧಾನಸಭೆಯ 18 ಬಿಜೆಪಿ ಸದಸ್ಯರನ್ನು 6 ತಿಂಗಳವರೆಗೆ ಅಮಾನತು ಮಾಡಿರುವ ಕಾಂಗ್ರೆಸ್ ಸರ್ಕಾರದ ಆದೇಶ ರದ್ದು ಮಾಡಬೇಕು. ಅಂದು ನಡೆದ ಅಧಿವೇಶನದ ಕಲಾಪದಲ್ಲಿ ಹನಿಟ್ರ್ಯಾಪ್ ಮತ್ತು ಮುಸ್ಲಿಮರಿಗೆ ಶೇ4ರಷ್ಟು ಮೀಸಲಾತಿಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಚರ್ಚೆಯು ವಾಗ್ವಾದಕ್ಕೆ ಕಾರಣವಾಗಿತ್ತು. ಪ್ರತಿಪಕ್ಷಗಳ ಸದಸ್ಯರಾಗಿ ನಾವು ಸಭಾಧ್ಯಕ್ಷರ ಪೀಠದ ಬಳಿ ಪ್ರತಿಭಟನೆ ನಡೆಸಿದ್ದೆವು. ಆದರೆ, ಸ್ಪೀಕರ್ ಯು.ಟಿ.ಖಾದರ್ ಹಾಗೂ ಆಡಳಿತ ಪಕ್ಷ ನಮ್ಮ ಪ್ರತಿಭಟನೆಯನ್ನು ತಪ್ಪಾಗಿ ಗ್ರಹಿಸಿವೆ. ನಮ್ಮ ಪ್ರತಿಭಟನೆಯಿಂದ ಸದನದ ಘನತೆಗೆ ಯಾವುದೇ ಚ್ಯುತಿಯಾಗಿಲ್ಲ. ಆದರೂ, ಪಕ್ಷದ 18 ಶಾಸಕರನ್ನು ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 348ರ ಅಡಿ ಅಮಾನತುಗೊಳಿಸಲಾಗಿದೆ ಎಂದು ಬಿಜೆಪಿ ದೂರು ನೀಡಿದೆ.