ಬೆಂಗಳೂರು

ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನೆಡಸಿದ ಕರವೇಯ ನಾರಾಯಣ ಗೌಡರು

ಬೆಂಗಳೂರು:- ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆ ನೀಡದೆ ಇರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಇದೀಗ ಈ ಸಂಬಂಧ ಎಸ್‌ಬಿಐ ಬ್ಯಾಂಕ್‌ನ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆದಿದೆ. ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಅಧಿಕಾರಿಗಳೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ.ಟಿ.ಎ ಅವರು ಮಹತ್ವದ ಸಭೆಯನ್ನು ನಡೆಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯ ಚಂದಾಪುರದ ಘಟನೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉನ್ನತ ಅಧಿಕಾರಿಗಳು ಮಹತ್ವದ ಸಭೆ ಸಭೆಯೊಂದನ್ನು ಆಯೋಜಿಸಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರನ್ನು ಆಹ್ವಾನಿಸಿದ್ದು, ಸ್ವಾಭಿಮಾನಿ ಕನ್ನಡಿಗರ ಪರವಾಗಿ ನಮ್ಮ ಹಕ್ಕೊತ್ತಾಯಗಳ ಕುರಿತು ಈ ಸಭೆಯಲ್ಲಿ ಚರ್ಚಿಸಿದೆ ಎಂದು ನಾರಾಯಣಗೌಡ ಅವರು ಹೇಳಿದ್ದಾರೆ.

ಸುಮಾರು ಮುಕ್ಕಾಲು ಗಂಟೆಯ ಕಾಲ ಎಲ್ಲ ಅಧಿಕಾರಿಗಳನ್ನು ನನ್ನ ಮಾತುಗಳನ್ನು ಆಲಿಸಿದರು ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರು. ನಮ್ಮ ಹಕ್ಕೊತ್ತಾಯಗಳ ಕುರಿತು ಚರ್ಚಿಸಿ ಹದಿನೈದು ದಿನಗಳ ಒಳಗೆ ಸೂಕ್ತ ಪ್ರತಿಕ್ರಿಯೆಯನ್ನು ನೀಡುವುದಾಗಿ ಅವರು ಹೇಳಿದರು. ಚಂದಾಪುರ ಶಾಖೆಯಲ್ಲಿ ನಡೆದಂಥ ಘಟನೆಗಳು ಮತ್ತೆ ಜರುಗದಂತೆ ನೋಡಿಕೊಳ್ಳುವುದಾಗಿ ಅವರು ಭರವಸೆ ನೀಡಿದರು ಎಂದು ಅವರು ಹೇಳಿದ್ದಾರೆ.

ಸಭೆಯ ಚರ್ಚಾ ವಿಷಯ:

1.ಕನ್ನಡಿಗರಿಗೆ ಶೇ.80 ರಷ್ಟು ಉದ್ಯೋಗ ಮೀಸಲಾತಿ.

2.ಕನ್ನಡ ಮಾತನಾಡಲು ನಿರಾಕರಿಸುವ ಅಧಿಕಾರಿ – ಸಿಬ್ಬಂದಿ ವರ್ಗಾವಣೆ.

3.ಕನ್ನಡ ಭಾಷಾ ತರಬೇತಿ ಮತ್ತು ಸಾಂಸ್ಕೃತಿಕ ಸಂವೇದನೆ ಕಾರ್ಯಕ್ರಮಗಳು.

4.ಕನ್ನಡ ಜಾರಿಗೆ ನೋಡಲ್ ಅಧಿಕಾರಿಗಳ ನೇಮಕ.

5.ಕನ್ನಡ ಭಾಷಿಕರನ್ನು ಮಾತ್ರ ನೇಮಕ ಮಾಡುವ ನೀತಿ.

6.ಚಂದಾಪುರ ಘಟನೆಯಂತಹ ಘಟನೆಗಳನ್ನು ತಡೆಗಟ್ಟಲು ಕಠಿಣ ಕ್ರಮಗಳು.

7.ಗ್ರಾಹಕರಿಗೆ ಕನ್ನಡದಲ್ಲಿ ಸೇವೆ ಒದಗಿಸುವ ಖಾತರಿ.

8.ಎಸ್‌ಬಿಐನಿಂದ ಕನ್ನಡ ಭಾಷೆಯ ಜಾರಿಗೆ ಸಂಬಂಧಿಸಿದ ಸ್ಪಷ್ಟ ನೀತಿಯ ರಚನೆ.

9.ಕರ್ನಾಟಕದ ಎಸ್‌ಬಿಐ ಶಾಖೆಗಳಲ್ಲಿ ಕನ್ನಡದ ಬಳಕೆಯನ್ನು ಕಡ್ಡಾಯಗೊಳಿಸುವ ಕಾಲಮಿತಿಯ ಒಪ್ಪಂದ.

10.ಕನ್ನಡಿಗರ ಭಾವನೆಗಳಿಗೆ ಗೌರವ ನೀಡುವ ಮತ್ತು ಸ್ಥಳೀಯ ಭಾಷೆಯನ್ನು ಉತ್ತೇಜಿಸುವ ಎಸ್‌ಬಿಐನ ಬದ್ಧತೆಯ ಸಾರ್ವಜನಿಕ ಘೋಷಣೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾತ್ರವಲ್ಲ, ರಾಷ್ಟ್ರೀಕೃತ ಬ್ಯಾಂಕ್ ಗಳು ಮತ್ತು ಖಾಸಗಿ ಬ್ಯಾಂಕ್ ಗಳಲ್ಲೂ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಅವಮಾನಗಳು ನಿಲ್ಲಬೇಕಿದೆ. ಇದಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಮುಂಬರುವ ದಿನಗಳಲ್ಲಿ ವ್ಯಾಪಕವಾದ ಅಭಿಯಾನಗಳನ್ನು ನಡೆಸಲಿದೆ ಎಂದು ತಿಳಿದು ಬಂದಿದೆ.