ಚಿಕ್ಕಮಗಳೂರು

ಭಯೋತ್ಪಾದಕರನ್ನು ಬೆಂಬಲಿಸುವ ಮುಂಚೆ ಈ ದೇಶದ ಭವಿಷ್ಯ ಯೋಚಿಸಿ.- ಜೀವರಾಜ್

ಚಿಕ್ಕಮಗಳೂರು:- ಜಿಲ್ಲೆಯ ನ.ರಾ.ಪುರದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಸಂಘ ಪರಿವಾರದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು ಜೊತೆಗೆ ವರ್ತಕರಿಂದ ಸ್ವಯಂ ಪ್ರೇರಿತ ಬಂದ್ ಮಾಡಲಾಗಿತ್ತು. ಮಾಜಿ ಸಚಿವ ಡಿ.ಎನ್.ಜೀವರಾಜ್ ಈ ಸಂದರ್ಭದಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಭಯೋತ್ಪಾದನಾ ಪ್ರಕರಣಗಳನ್ನು ರಾಜಕಾರಣಗೊಳಿಸುತ್ತಾ ಹೋದರೆ ಈ ದೇಶ ಸಂಕಷ್ಟಕ್ಕೆ ಸಿಲುಕುತ್ತದೆ. ಗೃಹ ಸಚಿವರು ಸುಹಾಸ್ ಮೇಲೆ ಐದು ಕೇಸುಗಳು ಇದೆ ಎಂದಿದ್ದಾರೆ. ನಿಮ್ಮ ಪಕ್ಷದ ಶಾಸಕರು, ಸಚಿವರ ಮೇಲೆ ಎಷ್ಟು ಕೇಸು ಇದೆ ಎಂಬುದನ್ನು ನೋಡಿಕೊಳ್ಳಿ ಎಂದ ಅವರು, ಭಯೋತ್ಪಾದಕರನ್ನು ಬೆಂಬಲಿಸುವ ಮುಂಚೆ ಈ ದೇಶದ ಭವಿಷ್ಯ, ಮುಂದಿನ ಮಕ್ಕಳ ಭವಿಷ್ಯವನ್ನು ಸಹ ಯೋಚಿಸಿ. ಕಾಶ್ಮೀರದಲ್ಲಿ ಗುಪ್ತಚರ ವೈಪಲ್ಯ, ಭದ್ರತಾ ವೈಪಲ್ಯ ಎನ್ನುತ್ತೀರಿ. ಈಗಾಗಲೇ ಹಿಂದೂ ಕಾರ್ಯಕರ್ತರಾದ ಹರ್ಷ, ಪ್ರವೀಣ್ ಕುಮಾರ್, ಸುಹಾಸ್ ಶೆಟ್ಟಿ ಅಂತವರನ್ನು ಕಳೆದುಕೊಂಡಿದ್ದೇವೆ. ಮುಂದೆ ಹಿಂದೂ ಸಮಾಜಕ್ಕಾಗಿ, ದೇಶಕ್ಕಾಗಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು.

ಕಾಶ್ಮೀರದ ಪೆಹಾಲ್ಗಾಮ್‌ನಲ್ಲಿ ಹಿಂದೂಗಳ ಕಗ್ಗೊಲೆಯಾದ ನಂತರ ಈಗ ಮಂಗಳೂರಿನಲ್ಲಿ ಹಿಂದೂ ಯುವಕ ಸುಹಾಸ್ ಶೆಟ್ಟಿಯ ವಾಹನಕ್ಕೆ ಬೇರೆ ವಾಹನದಿಂದ ಡಿಕ್ಕಿ ಹೊಡೆಸಿ ಕೊಚ್ಚಿ ಕೊಲೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದವರು ಪಹಾಲ್ಗಾಮ್‌ನಲ್ಲಿ ಹಿಂದೂಗಳ ದಾರುಣ ಹತ್ಯೆಯನ್ನು ಭದ್ರತಾ ಲೋಪ ಎನ್ನುತ್ತಾರೆ. ಈಗ ಮಂಗಳೂರಿನಲ್ಲಿ ಭದ್ರತಾ ಲೋಪ ಆಗಿಲ್ಲವೇ ಎಂದು ಪ್ರಶ್ನಿಸಿದರು. ಗೃಹ ಸಚಿವರು ಸುಹಾಸ್ ಶೆಟ್ಟಿಯನ್ನು ರೌಡಿ ಶೀಟರ್ ಎಂದು ಕರೆದಿದ್ದಾರೆ. ಪ್ರಸ್ತುತ ಕೊಲೆಯಾದ ಸುಹಾಸ್ ಶೆಟ್ಟಿ ಮನೆಗೆ ಸಚಿವರು ಭೇಟಿ ನೀಡಿಲ್ಲ, ಪರಿಹಾರ ಸಹ ನೀಡಿಲ್ಲ. ಶಿವಮೊಗ್ಗ, ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ಹಿಂದೂಗಳ ಮೇಲೆ ಹಲ್ಲೆಯಾದಾಗ ಅರೋಪಿಗಳನ್ನು ಅಮಾಯಕರು ಎಂದು ಮುಖ್ಯಮಂತ್ರಿಗಳು, ಗೃಹ ಸಚಿವರು ಬಣ್ಣನೆ ಮಾಡುತ್ತಾರೆ. ಕಾಶ್ಮೀರದಲ್ಲಿ ಕೊಲೆಯಾದವರು ಹಿಂದೂಗಳು ಎನ್ನದೆ ಪ್ರವಾಸಿಗರು ಎನ್ನುತ್ತಾರೆ, ಅವರು ಹಿಂದೂಗಳು ಎಂದಿದ್ದಕ್ಕೆ ಕೊಲೆಯಾಗಿದ್ದಾರೆ. ಶೃಂಗೇರಿ ಶ್ರೀ ಮಠದಿಂದ ಕಾಶ್ಮೀರದಲ್ಲಿ ಕೊಲೆಯಾದ ಎಲ್ಲಾ 22 ಜನರ ಕುಟುಂಬದವರಿಗೂ 2 ಲಕ್ಷ ಪರಿಹಾರ ನೀಡಿದ್ದಾರೆ. ಸುಹಾಸ್ ಶೆಟ್ಟಿ ಕೊಲೆಯ ಪ್ರಕರಣದ ಸತ್ಯ ಹೊರ ಬರಬೇಕಾದರೆ ಈ ಪ್ರಕರಣವನ್ನು ಎನ್.ಐ.ಎ ಯಿಂದ ತನಿಖೆ ಮಾಡಿಸಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್ ಕುಮಾರ್ ಸೇರಿದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಮೂಡಬಾಗಿಲು ಸಚಿನ್, ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕೋಣನಕೆರೆ ಸತ್ಯನಾರಾಯಣ, ಜಿಲ್ಲಾ ಸಹ ಕಾರ್ಯದರ್ಶಿ ಮದನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಡಿಗೇಶ್ವರ ಅಭಿಷೇಕ್, ತಾ.ಕಾರ್ಯದರ್ಶಿ ಅರುಣಕುಮಾರ್ ಜೈನ್, ತಾ.ಬಿಜೆಪಿ ಅಧ್ಯಕ್ಷ ನೀಲೇಶ್, ತಾ.ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರೀತಂ, ನಗರ ಅಧ್ಯಕ್ಷ ಸುರಭಿ ರಾಜೇಂದ್ರ, ತಾ.ವಕ್ತಾರ ಎನ್.ಎಂ.ಕಾಂತರಾಜ್, ಬಿಜೆಪಿ ಮುಖಂಡರಾದ ಅರುಣಕುಮಾರ್, ಆಶೀಶ್ ಕುಮಾರ್, ಕೆಸವಿ ಮಂಜುನಾಥ್, ಮಂಜುನಾಥ್ ಲಾಡ್, ಎ.ಬಿ.ಮಂಜುನಾಥ್, ಎನ್.ಡಿ.ಪ್ರಸಾದ್, ಎಚ್.ಡಿ.ಲೋಕೇಶ್, ಶ್ರೀನಾಥ್, ಕೈಮರ ರಾಜೇಂದ್ರ ಕುಮಾರ್, ಅಶ್ವನ್, ನಾ.ಮ.ನಾಗೇಶ್, ಅವಿನಾಶ್, ಪ್ರಸನ್ನ ಮತ್ತಿತರರು ಇದ್ದರು.