ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಪಿಕಪ್ ಚಾಲಕನ ಮೇಲೆ ಯುವಕರಿಬ್ಬರು ತಲವಾರಿನಿಂದ ಹಲ್ಲೆಗೈದು ಕೊಲೆಗೈದ ಘಟನೆ ನಡೆದಿದೆ.
ಹತ್ಯೆಯಾದವರನ್ನು ಕೊಳತ್ತಮಜಲು ನಿವಾಸಿ ‘ರಹೀಂ’ ಎಂದು ಗುರತಿಸಲಾಗಿದ್ದು, ಈತನ ಜತೆಗಿದ್ದ ಇನ್ನೊಬ್ಬ ಯುವಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇರಾಕೋಡಿ ಎಂಬಲ್ಲಿ ಮರಳು ಅನ್‌ಲೋಡ್ ಮಾಡುತ್ತಿದ್ದ ವೇಳೆ ಬೈಕ್‌ನಲ್ಲಿ ಆಗಮಿಸಿದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ರಹೀಂ ಮೇಲೆ ದಾಳಿ ಮಾಡಿದ್ದಾನೆ. ಮೃತದೇಹ ಹಾಗೂ ಗಾಯಗೊಂಡ ವ್ಯಕ್ತಿಯನ್ನು ಮಂಗಳೂರು ಆಸ್ಪತ್ರೆಗೆ ಕರೆತರಲಾಗಿದೆ.
ಇನ್ನೂ ಘಟನೆಯಲ್ಲಿ ಗಾಯಗೊಂಡ ಯುವಕನಿಗೆ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.
ಈಚೆಗಷ್ಟೇ ಮೇ 1ರಂದು 2022ರ ಮೊಹಮ್ಮದ್ ಫಾಜಿಲ್ ಕೊಲೆ ಪ್ರಕರಣದ ಆರೋಪಿ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ನಡೆದಿತ್ತು. ಕಾಟಿಪಳ್ಳ- ಕೋಡಿಕೆರೆ ನಿವಾಸಿ 42 ವರ್ಷದ ಸುಹಾಸ್‌ನನ್ನು ತಂಡವೊಂದು ಬೆನ್ನಟ್ಟಿ ಬಜಪೆ ಕಿನ್ನಿಪದವು ಎಂಬಲ್ಲಿ ಭೀಕರವಾಗಿ ಹತ್ಯೆಗೈದಿತ್ತು.
ಈ ಘಟನೆ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆ ಬಂದ್, ನಿಷೇಧಾಜ್ಞೆ, ಪ್ರತಿಭಟನೆಗಳೆಲ್ಲ ನಡೆದಿದ್ದವು. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು 11 ಜನರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.