ವಿಜಯಪುರ:- ವಿಜಯಪುರ ಜಿಲ್ಲೆಯಲ್ಲಿ ಕಳೆದ ರಾತ್ರಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದ್ದಾನೆ, ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿದ ಪರಿಣಾಮವಾಗಿ ಅಲ್ಲಲ್ಲಿ ಅವಘಡಗಳು ಸಂಭವಿಸಿವೆ. ವಿಜಯಪುರ ಜಿಲ್ಲೆಯಲ್ಲಿ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಮನೆ ಕುಸಿತಗೊಂಡಿದೆ.
ಮನೆಯ ಮೇಲ್ಛಾವಣಿ ಕುಸಿದು ಮನೆಯಲ್ಲಿ ಮಲಗಿದ್ದ ಗೃಹಿಣಿ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಡೆದಿದೆ. ಸಂಗೀತಾ ಗಂಡ ಬಾಳಾಸಾಹೇಬ ಪಾಟೀಲ(30) ಮೃತ ದುರ್ದೈವಿಯಾಗಿದ್ದಾಳೆ. ಕಳೆದ ತಡರಾತ್ರಿ ಮನೆಯಲ್ಲಿ ಮಲಗಿದ್ದಾಗ ಅವಘಡ ಸಂಭವಿಸಿದೆ. ಮಳೆಯಿಂದಾಗಿ ಮನೆ ಸೋರುತ್ತಿದ್ದ ವೇಳೆ ಮನೆಯಿಂದ ಎದ್ದು ಹೊರ ಬಂದಿದ್ದರಿಂದ ಪತಿ ಹಾಗೂ ಮಕ್ಕಳು ಪಾರಾಗಿದ್ದಾರೆ. ಮೃತಳ ಶವ ತೆಗೆಯಲು ಹರಸಾಹಸ ಪಡಬೇಕಾಯಿತು. ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದು ಪ್ರಕರಣ ದಾಖಲಾಗಿದೆ.