ಬೆಂಗಳೂರು

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿ ಮುಂದೂಡಿದ ಹೈಕೋರ್ಟ್

ಬೆಂಗಳೂರು:- ಮನೆ ಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ 2ನೇ ಬಾರಿಗೆ ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿರುವ ಕರ್ನಾಟಕ ಹೈಕೋರ್ಟ್, ಕಾಲಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ವಿಚಾರಣೆ ಮತ್ತೆ ಬುಧವಾರ ಮುಂದೂಡಿತು.

ನ್ಯಾ.ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು, ಪ್ರಜ್ವಲ್‌ ಕುಟುಂಬ ಪ್ರಭಾವಿಯಾಗಿದೆ. ಸಂತ್ರಸ್ತೆಯನ್ನು KIDNAP ಮಾಡಿದ ಪ್ರಕರಣವೂ ಅವರ ಕುಟುಂಬದ ಮೇಲಿದೆ.
ಉದ್ದೇಶಪೂರ್ವಕವಾಗಿ ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆಯನ್ನು ವಿಳಂಬ ಮಾಡಿಸಿದ್ದಾರೆ. ಅಲ್ಲದೇ ಪ್ರಜ್ವಲ್‌ ತಂದೆ ಹೆಚ್.ಡಿ.ರೇವಣ್ಣ ಅವರ ಕಾಲಿಗೆ ಬಿದ್ದು ಕ್ಷಮೆಯಾಚಿಸುವ ಎಂದು ಪೊಲೀಸರೇ ಸಂತ್ರಸ್ತೆಗೆ ಹೇಳಿದ್ದಾರೆ. ಇದಕ್ಕಾಗಿಯೇ ಅದನ್ನು ರೇವಣ್ಣ ರಿಪಬ್ಲಿಕ್‌ ಎಂದು ವ್ಯಾಖ್ಯಾನಿಸಲಾಗಿತ್ತು. ಪ್ರಜ್ವಲ್‌ ಜಾಮೀನಿಗೆ ಅರ್ಹವಾಗಿಲ್ಲ ಎಂದು ವಾದ ಮಂಡಿಸಿದರು. ಇನ್ನು ಸಮಯದ ಅಭಾವ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕೋರ್ಟ್​​ ಮುಂದೂಡಿತು.

ಸಾಮಾನ್ಯವಾಗಿ ವಿಚಾರಣಾಧೀನ ಕೈದಿಗಳು ಮೊದಲಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಬೇಲ್​​​ಗಾಗಿ ಕೋರಿ ಆ ಬಳಿಕ ಹೈಕೋರ್ಟ್‌ಗೆ ಬರಬೇಕು. ಆದರೆ, ಇಲ್ಲಿ ಅಂಥ ವಿಶೇಷ ಆಧಾರ ಏನಿದೆ? ಪ್ರಜ್ವಲ್‌ ನೇರವಾಗಿ ಹೈಕೋರ್ಟ್‌ಗೆ ಏಕೆ ಬಂದಿದ್ದಾರೆ? ಜಾಮೀನು ಅರ್ಜಿಯನ್ನು ನೇರವಾಗಿ ಏಕೆ ಹೈಕೋರ್ಟ್‌ ಪರಿಗಣಿಸಬಾರದು ಎಂಬುವುದಕ್ಕೆ ಹೈಕೋರ್ಟ್‌ನ ಸಮಗ್ರ ತೀರ್ಪಿದೆ. ಈ ನೆಲೆಯಲ್ಲಿ ಅರ್ಜಿಯನ್ನು ವಜಾಗೊಳಿಸಬೇಕು.

ಕಳೆದ ಲೋಕಸಭಾ ಚುನಾವಣೆಗೂ ಮುನ್ನ ತಮ್ಮ ವಿಡಿಯೋಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪ್ರಜ್ವಲ್‌ ಮಾಧ್ಯಮಗಳ ವಿರುದ್ಧ ವಿಚಾರಣಾಧೀನ ನ್ಯಾಯಾಲಯದಲ್ಲಿ ಏಕಪಕ್ಷೀಯ ಪ್ರತಿಬಂಧಕಾದೇಶ ಪಡೆದುಕೊಂಡಿದ್ದರು. ಆನಂತರ ದೇಶ ತೊರೆದಿದ್ದರು. ವಿಚಾರಣೆ ವಿಳಂಬವಾಗಲು ಪ್ರಜ್ವಲ್‌ ನೇರ ಹೊಣೆ. ಇದನ್ನು ವಿಚಾರಣಾಧೀನ ನ್ಯಾಯಾಲಯವು ತನ್ನ ಆದೇಶದಲ್ಲಿ ದಾಖಲಿಸಿದೆ ಎಂದು ಪ್ರೊ.ಕುಮಾರ್ ಅವರು ವಾದಿಸಿದ್ದರು.