ಶಿವಮೊಗ್ಗ

ಮಾಜಿ ಸಚಿವರಾದ ಬೇಗಾನೆ ರಾಮಯ್ಯನವರ ವೈಕುಂಠ ಸಮಾರಾಧನೆ ನಾಳೆ ಶಿವಮೊಗ್ಗದಲ್ಲಿ

ಶಿವಮೊಗ್ಗ:- ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಬೇಗಾನೆ ರಾಮಯ್ಯನವರ ವೈಕುಂಠ ಸಮಾರಾಧನೆಯು ಮೇ 18ರ ಭಾನುವಾರ ಶಿವಮೊಗ್ಗ ನಗರದ ಸಾಗರ ರಸ್ತೆಯ ಕಾಸ್ಮೋ ಫ್ಯಾಮಿಲಿ ಕ್ಲಬ್ ಮಗೇನಹಳ್ಳಿಯಲ್ಲಿ ಏರ್ಪಡಿಸಲಾಗಿದೆ ಎಂದು ಕುಟುಂಬ ಮೂಲ ತಿಳಿಸಿದೆ.
ರಾಮಯ್ಯನವರ ಸುಪುತ್ರಿ, ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಉಪಾಧ್ಯಕ್ಷೆ ಶ್ರೀಮತಿ ಡಾ.ಆರತಿಕೃಷ್ಣರವರು ಚಿರಶಾಂತಿ ಕೋರಲು ತಂದೆಯವರ ಆತ್ಮೀಯರಿಗೆ, ಅಭಿಮಾನಿಗಳಿಗೆ, ಕುಟುಂಬವರ್ಗದವರು ಆಗಬೇಕಾಗಿ ವಿನಂತಿಸಿದ್ದಾರೆ.

ಮಾಜಿ ಸಚಿವರು ಹಾಗೂ ಹಿರಿಯ ಮುತ್ಸದ್ದಿಗಳಾಗಿದ್ದ ಬೇಗಾನೆ ರಾಮಯ್ಯ ಅವರು ಏಪ್ರಿಲ್24ರ ಮಧ್ಯಾಹ್ನ ನಿಧನ ಹೊಂದಿದ್ದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಿದ್ಯಾರ್ಥಿ ದೆಸೆಯಿಂದಲೂ ರಾಜಕೀಯದಲ್ಲಿ ಸಕ್ರೀಯರಾಗಿದ್ದ ಬೇಗಾನೆ ರಾಮಯ್ಯ ಅವರು 1978ರಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ವಿಧಾನಸೌಧದ ಮೆಟ್ಟಿಲೇರಿದರು. ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಅವರ ಮಾರ್ಗದರ್ಶನ ಇವರನ್ನ ಪಕ್ವವಾಗಿಸುತ್ತದೆ. ಪಕ್ಷ ಸಂಘಟನೆ, ಜನಪರ ಕಾಳಜಿ ಹಾಗೂ ಕ್ರಿಯಾಶೀಲ ಮನೋಭಾವದಿಂದ ರಾಜಕೀಯದಲ್ಲಿ ಬೇಗನೆ ತಮ್ಮ ಛಾಪು ಮೂಡಿಸಿದದ್ದರು. ರಾಮಯ್ಯ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಅನೇಕ ಜನಪರ ಕಾರ್ಯಗಳ ಮೂಲಕ ಇಡೀ ರಾಜ್ಯಾದ್ಯಂತ ಜನರ ವಿಶ್ವಾಸಕ್ಕೆ ಪಾತ್ರರಾಗುತ್ತಾರೆ. ಅದರಲ್ಲೂ ಮಲೆನಾಡು ಭಾಗಕ್ಕೆ ಕುಡಿಯುವ ನೀರು ತರುವಲ್ಲಿ ಇವರ ಶ್ರಮ ಹಾಗೂ ಕಾಳಜಿ ಅವಿಸ್ಮರಣೀಯ. ಅಂದು 250 ಮನೆಗಳಿದ್ದ ಗ್ರಾಮಗಳಲ್ಲಿ ಮಾತ್ರ ಬೋರ್ ವೆಲ್ ಕೊರೆಸಲು ಅನುಮತಿಯಿದ್ದ ಸರ್ಕಾರದ ನಿಯಮಕ್ಕೆ ತಿದ್ದುಪಡಿ ತಂದು ಆ ಮೂಲಕ ಮಲೆನಾಡಿನ ಭಾಗದಲ್ಲಿ ನೀರಿನ ಅಭಾವಕ್ಕೆ ಇತಿಶ್ರೀ ಹಾಡಿ, ಹೀಗಾಗಿ ಇವರನ್ನ ಮಲೆನಾಡಿನ ಭಗೀರಥ, ಬೋರ್ ವೆಲ್ ರಾಮಯ್ಯ ಎಂದು ಜನ ಪ್ರೀತಿಯಿಂದ ಕೊಂಡಾಡುತ್ತಾರೆ.

ಚಾಕಚಕ್ಯತೆಯಿಂದಾಗಿಯೇ ಬೇಗಾನೆ ರಾಮಯ್ಯ ಅವರು ಅತ್ಯುತ್ತಮ ಸಂಸದೀಯ ಪಟು ಎಂದು ಗುರುತಿಸಲ್ಪಟ್ಟಿದ್ದರು. ಅಪಾರ ಭಾಷಾ ಜ್ಞಾನ ಹಾಗೂ ಇಂಗ್ಲೀಷ್ ಪ್ರಾವಿಣ್ಯತೆ ಬೇಗಾನೆ ರಾಮಯ್ಯ ಅವರಲ್ಲಿತ್ತು. ಈ ಕಾರಣಕ್ಕೆ ಅವರು ಇಂದಿರಾಗಾಂಧಿ, ರಾಜೀವ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ವರಿಷ್ಠರ ಒಡನಾಟ ಗಳಿಸುವ ಮೂಲಕ ಅವರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅದರಲ್ಲೂ ವಿಶೇಷವಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಭಾಷಣಗಳನ್ನ ಸುಲಭವಾಗಿ ಕನ್ನಡಕ್ಕೆ ತರ್ಜುಮೆ ಮಾಡುವ ಮೂಲಕ ಜನರಿಗೆ ಮನಮುಟ್ಟುವಂತೆ ತಲುಪಿಸುತ್ತಿದ್ದರು. ಸ್ವಾರ್ಥ ಹಾಗೂ ಅಧಿಕಾರ ದಾಹದ ರಾಜಕಾರಣವನ್ನ ಯಾವತ್ತೂ ಮಾಡದೆ, ಜನಪರ ಚಿಂತನೆ, ಗ್ರಾಮೀಣಾಭಿವೃದ್ಧಿ, ನಿಸ್ವಾರ್ಥ ಸೇವೆಯ ಮೂಲಕ ಮಾದರಿ ವ್ಯಕ್ತಿಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ಆದರ್ಶಗಳು ಪಕ್ಷಾತೀತವಾಗಿ ಎಲ್ಲ ರಾಜಕಾರಣಿಗಳಿಗೆ ಪ್ರೇರಣೆಯಾದರು.