ಬೆಂಗಳೂರು:- ಮಾದಕ ವ್ಯಸನದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಕೋಮು ಸಾಮರಸ್ಯ ಮೂಡಿಸುವುದರೊಂದಿಗೆ ಸಂಚಾರ ಸುರಕ್ಷತೆಯನ್ನು ಹೆಚ್ಚಿಸುವ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಯುವ ಸಮೂಹವು ಭಾಗವಹಿಸಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ ಬಾವಾ ಹೇಳಿದರು.
ಅವರು ಸಿ.ಎ ನೌಫಲ್ & ಕಂಪೆನಿ ಮತ್ತು ಯೂತ್ ಮೂವ್ ಮೆಂಟ್ ಆಫ್ ಇಂಡಿಯಾ ಜಂಟಿ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಭಾನುವಾರ ನಡೆಯುವ ವಾಲ್ಕಥಾನ್ ಜಾಗೃತಿ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಯುವಕರಿಗೆ, ವಿದ್ಯಾರ್ಥಿಗಳಿಗೆ ಭಾಗವಹಿಸಿಲು ಕರೆ ನೀಡಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ವಾಲ್ಕಥಾನ್ ಮೂಲಕ ವಿದ್ಯಾರ್ಥಿಗಳು ಮತ್ತು ಯುವ ಸಮುದಾಯವು ಬೆಂಗಳೂರಿನ ಟೌನ್ ಹಾಲ್ ನಿಂದ ಜೂನ್ 22 ರ ಬೆಳಿಗ್ಗೆ 7 ಗಂಟೆಗೆ ಕಾಲ್ನಡಿಗೆ ಜಾಥಾದೊಂದಿಗೆ ಫ್ರೀಡಂ ಪಾರ್ಕ್ ವರೆಗೆ ಸಾಗಲಿದೆ. ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ‘ಯಂಗ್ ಬ್ರಿಗೇಡ್’ ನ ಮುಖ್ಯಸ್ಥ ಜುನೈದ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಯುವ ಸಮುದಾಯದಲ್ಲಿ ಮಾದಕ ವ್ಯಸನದ ಬಗ್ಗೆ ಜಾಗೃತಿ ಮಾಡಿಸುವ ವಿಭಿನ್ನ ಕಾರ್ಯಕ್ರಮ ನಾವು ಹಮ್ಮಿಕೊಳ್ಳಲಿದ್ದೇವೆ. ವಿಶೇಷವಾಗಿ ಈಗಿನ ಸ್ಥಿತಿಯಲ್ಲಿ ಹಲವು ಯುವಕರು, ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡುತ್ತಿರುವುದು ಹೆಚ್ಚುತ್ತಿದೆ. ಹಾಗಾಗಿ, ನಾವು ಕೌನ್ಸಿಲಿಂಗ್ ಕೇಂದ್ರವನ್ನು ತೆರೆಯಲು ಉದ್ದೇಶ ಮಾಡಿದ್ದೇವೆ. ಮಾನಸಿಕ ಮತ್ತು ಶಾರೀರಿಕ ಉನ್ನತಿ ಈಗ ಆರ್ಥಿಕ ಉನ್ನತಗಿಂತ ಪ್ರಾಮುಖ್ಯ ಪಡೆದಿದೆ. ಇದಕ್ಕೆ ಕಾರಣವಾದ ಅಂಶಗಳನ್ನು ನಾವು ಅಧ್ಯಯನ ಮಾಡಿ ಪರಿಹಾರ ಕ್ರಮಗಳನ್ನು ಮಾಡಲು ಉದ್ದೇಶ ಮಾಡಿದ್ದೇವೆ ಎಂದು ಸಿ.ಎ.ನೌಫಲ್ ಹೇಳಿದರು.