ಬೆಂಗಳೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಬಿ.ಕೆ. ಹರಿಪ್ರಸಾದ್ ನಿವಾಸಕ್ಕೆ ಭೇಟಿ: ಮಹತ್ವದ ಸಮಾಲೋಚನೆ

ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿ ಹರಿಪ್ರಸಾದ್ ಜೊತೆ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.

ಇಂದು ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಬಿ.ಕೆ.ಹರಿಪ್ರಸಾದ್ ಅವರ ನಿವಾಸಕ್ಕೆ ತೆರಳಿ ಹರಿಪ್ರಸಾದ್ ಅವರನ್ನು ಭೇಟಿಯಾದರು. ಇದೇ ವೇಳೆ ಈ ವೇಳೆ ವಸತಿ ಸಚಿವ ಜಮೀರ್ ಅಹಮದ್ ಖಾನ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗಿದ್ದರು.

ಬಿ.ಕೆ.ಹರಿಪ್ರಸಾದ್ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಬೆಳಗಿನ ಉಪಹಾರ ಸವಿದು, ಕೆಲ ಕಾಲ ಚರ್ಚೆ ನಡೆಸಿದ್ದಾರೆ. ಹರಿಪ್ರಸಾದ್ ನಿವಾಸದಲ್ಲಿ ಸಿಎಂ ಹಾಗೂ ಕಾಂಗ್ರೆಸ್ ನಾಯಕರ ಬ್ರೇಕ್ ಫಾಸ್ಟ್ ಮೀಟಿಂಗ್ ತೀವ್ರ ಕುತೂಹಲ ಮೂಡಿಸಿದೆ.

ಸದ್ಯ ಗೃಹ ಸಚಿವರನ್ನು ಬದಲಾವಣೆ ಮಾಡಬೇಕು ಎನ್ನುವ ಒತ್ತಾಯ ಮಂಗಳೂರಿನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಕರಾವಳಿಯಲ್ಲಿ ಕೋಮು ಕೃತ್ಯಗಳು ನಿಲ್ಲಬೇಕಾದರೆ ಸಮರ್ಥ ಗೃಹ ಸಚಿವರ ಅಗತ್ಯವಿದೆ. ಕಾಂಗ್ರೆಸ್ ನಲ್ಲಿ ನೇರ ಹಾಗೂ ನಿಷ್ಠೂರ ಮಾತುಗಳ ಮೂಲಕ ಜನಪ್ರಿಯವಾಗಿರುವ ಬಿ.ಕೆ.ಹರಿಪ್ರಸಾದ್ ಅವರು ಗೃಹ ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎನ್ನುವ ಮಾತುಗಳು ಮಂಗಳೂರಿನಾದ್ಯಂತ ಕೇಳಿ ಬಂದಿದೆ.

ಈಗಾಗಲೇ ಅಲ್ಪಸಂಖ್ಯಾತ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಕಾರ್ಯಕರ್ತರು ಗೃಹ ಸಚಿವರ ರಾಜೀನಾಮೆಗೆ ಆಗ್ರಹ ಮಾಡುತ್ತಿದ್ದಾರೆ. ಯುವ ಕಾಂಗ್ರೆಸ್ ಪದಾಧಿಕಾರಿಯೊಬ್ಬ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂದು ರಾಜೀನಾಮೆ ನೀಡಿದ ಬೆನ್ನಲ್ಲೇ ಮಾಜಿ ಮೇಯರ್ ಅಶ್ರಫ್ ಸೇರಿದಂತೆ ಮೂಡಿಗೆರೆಯ ಕಾಂಗ್ರೆಸ್ ಪದಾಧಿಕಾರಿ ಕೂಡ ರಾಜೀನಾಮೆ ನೀಡಿದ್ದರು.