ಚಿಕ್ಕಮಗಳೂರು

ಮೂಲ ಸೌಕರ್ಯವಿಲ್ಲದೆ ಮುಕ್ತಿಕಾಣದ ಮುಕ್ತಿಧಾಮ

ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಹೋಬಳಿಯ ವ್ಯಾಪ್ತಿಯ ಏಳು ಪಂಚಾಯಿತಿಗಳಲ್ಲಿ

ಬಹುತೇಕ ಕಡೆಗಳಲ್ಲಿ ಹಿಂದೂ ರುದ್ರಭೂಮಿಗಾಗಿ ಸರಕಾರದಿಂದ ಜಾಗ ಮಂಜೂರಾಗಿದ್ದರೂ ವ್ಯವಸ್ಥಿತ ಶೆಡ್ ನಿರ್ಮಿಸಿ ಮೂಲ ಸೌಲಭ್ಯ ಒದಗಿಸುವಲ್ಲಿ ಆಡಳಿತ ನಡೆಸುವ ಜನಪ್ರತಿನಿಧಿಗಳು, ಅಧಿಕಾರಿ ವರ್ಗದವರು ವಿಫಲರಾಗಿದ್ದಾರೆ.

ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಷರ ನಗರದ ಸರಕಾರಿ ಶಾಲೆ ಹಿಂಭಾಗದಲ್ಲಿರುವ ರುದ್ರಭೂಮಿ ಹದಿನೈದು ವರ್ಷ ಕಳೆದರೂ ಅಭಿವೃದ್ಧಿಯಾಗದೆ ಹಾಳು ಬಿದ್ದಿದೆ. ಕಡ್ಲೆಮಕ್ಕಿ, ರೇಣುಕಾ ನಗರ, ಸ್ಕೂಲ್‌ ಗದ್ದೆ, ವೀರಭದ್ರೇಶ್ವರ ನಗರದ ಸ್ಥಳೀಯರು ಈ ರುದ್ರಭೂಮಿ ಬಳಸಿಕೊಳ್ಳುತ್ತಿದ್ದಾರೆ. ಸ್ಮಶಾನಕ್ಕಾಗಿ ಐದು ಎಕರೆ ಜಾಗ ಮೀಸಲಿರಿಸಿದ್ದು, ಒತ್ತುವರಿ ಯಾಗಿರಬಹುದೆಂಬ ಸಂಶಯ ಗ್ರಾಮಸ್ಥರಲ್ಲಿದೆ. ಇಲ್ಲಿರುವ ಶೆಡ್‌ ಶೀಟ್‌ಗಳು ಗಾಳಿಗೆ ಹಾರಿ ಹೋಗಿದ್ದು, ಚೇಂಬರ್ ಇಡುವ ಜಾಗದಲ್ಲಿ ಬೃಹದಾಕಾರದ ಹೊಂಡ ನಿರ್ಮಾಣವಾಗಿದೆ. ಪಕ್ಕದಲ್ಲೇ ಕೆರೆಯಿದ್ದರೂ ಸಂಸ್ಕಾರದ ಶಾಸ್ತ್ರ ಸಂಪ್ರದಾಯಗಳಿಗೆ ಬಳಸಿಕೊಳ್ಳಲು ಮೂಲ ಸೌಲಭ್ಯ ನೀಡಿಲ್ಲ. ಈ ಹಿಂದೆ ಹಿಂದೂಪರ ಸಂಘಟನೆಗಳು ಆವರಣವನ್ನು ಸ್ವಚ್ಛಗೊಳಿಸಿದ್ದು ಬಿಟ್ಟರೆ ಪಂಚಾಯಿತಿಯ ಯಾವೊಬ್ಬರು ಈ ಕಡೆಗೆ ತಿರುಗಿಯೂ ನೋಡಿಲ್ಲವೆಂಬ ದೂರು ಸ್ಥಳೀಯರದಾಗಿದೆ.

ಕಳಸ, ಹೊರನಾಡು ಮಾರ್ಗದಲ್ಲಿ ಬನ್ನೂರು ಪಂಚಾಯಿತಿಯಿಂದ ಐದು ಎಕರೆ ಜಾಗದಲ್ಲಿ ರುದ್ರಭೂಮಿ ನಿರ್ಮಿಸಲಾಗಿದೆ. ಇಲ್ಲಿನ ಶೆಡ್, ಗೋಡೆ, ಚೇಂಬರ್, ಚಾವಣಿಯ ಶೀಟ್‌ಗಳು ಬೀಳುವ ಸ್ಥಿತಿಯಲ್ಲಿದ್ದು, ಕೊಳಚೆ, ತ್ಯಾಜ್ಯಗಳಿಂದ ಆವರಿಸಿ ದುರ್ವಾಸನೆ ಬೀರುತ್ತಿದೆ. ಬನ್ನೂರು ಗ್ರಾಮ ಪಂಚಾಯಿತಿ ಇದನ್ನು ಅಭಿವೃದ್ಧಿಪಡಿಸದೆ ಜವಾಬ್ದಾರಿ ಮರೆತಿದೆ.

ಸ್ಮಶಾನವು ಗಿಡಗಂಟಿಗಳಿಂದ ಕೂಡಿದ್ದು, ಶವನ್ನು ಮುಕ್ತಿಧಾಮಕ್ಕೆ ಕೊಂಡೊಯ್ಯಲು ವ್ಯವಸ್ಥಿತವಾದ ರಸ್ತೆಯಿಲ್ಲ, ದುಃಖತಪ್ತ ಕುಟುಂಬಗಳ ಮನಃ ಶಾಂತಿಗಾಗಿ ಗುಡಿ ನಿರ್ಮಿಸಿದ್ದು, ಈವರೆಗೂ ದೇವರನ್ನು ಪ್ರತಿಷ್ಠಾಪಿಸದೆ ಹಾಳು ಬಿಡಲಾಗಿದೆ.

ಖಾಂಡ್ಯ ಹೋಬಳಿಯ ದೇವದಾನ ಪಂಚಾಯಿತಿ ಹಿಂಭಾಗದಲ್ಲಿ ವ್ಯವಸ್ಥಿತವಾದ ರುದ್ರಭೂಮಿ ಇರುವುದು ಹೊರತುಪಡಿಸಿದರೆ ಕಡವಂತಿ, ಹುಯಿಗೆರೆ, ಬಿದರೆ, ಬಾಳೆಹೊನ್ನೂರು ಹೋಬಳಿಯ ಆಡುವಳ್ಳಿ, ಮೇಲ್ಬಾಲ್, ಕಾನೂರು, ಕಟ್ಟಿನಮನೆ ವ್ಯಾಪ್ತಿಯಲ್ಲಿ ಸರಕಾರದಿಂದ ಭೂಮಿಯಷ್ಟೇ ಮಂಜೂರಾಗಿದೆ.

ಇನ್ನು ಅಕ್ಷರ ನಗರದ ಸ್ಮಶಾನದ ಶೆಡ್ ಬೀಳುವ ಹಂತದಲ್ಲಿದೆ. ಆವರಣದಲ್ಲಿ ಕಸ, ತ್ಯಾಜ್ಯಗಳಿಂದ ಕೂಡಿದ್ದು, ಅಂತ್ಯಸಂಸ್ಕಾರದ ವಿಧಿ ವಿಧಾನಗಳಿಗೆ ಅನುಕೂಲವಾಗುವಂತೆ ಪಕ್ಕದಲ್ಲಿರುವ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರಾದ ವೇಲಾಯುದನ್ ಹೇಳಿದ್ದಾರೆ.

ಸ್ಮಶಾನ ಅಭಿವೃದ್ಧಿಪಡಿಸುವಲ್ಲಿ ಸರಕಾರ, ಜನಪ್ರತಿನಿಧಿಗಳು

ವಿಫಲರಾಗಿದ್ದು, ಏನನ್ನೂ ನಿರೀಕ್ಷಿಸದ ಪರಿಸ್ಥಿತಿಯಲ್ಲಿ ನಾವು ಇದ್ದೇವೆ, ಗ್ರಾಮದ ಪ್ರತಿ ಮನೆಮನೆಗೂ ತೆರಳಿ ಒಗ್ಗೂಡಿಸಿ ರುದ್ರಭೂಮಿಯಲ್ಲಿ ಶ್ರಮದಾನ ಮಾಡುವ ಚಿಂತನೆ ಇದೆ ಎಂದು ಬಾಳೆಹೊನ್ನೂರಿನ ಸಾಮಾಜಿಕ ಹೋರಾಟಗಾರ ಬಿ.ಜಗದೀಶ್ಚಂದ್ರ ಈ ಸಂದರ್ಭದಲ್ಲಿ ಹೇಳಿಕೆಯೊಂದನ್ನು ನೀಡಿದ್ದಾರೆ.

ಮೂಲ ಸೌಲಭ್ಯಗಳಿಲ್ಲದ ರುದ್ರಭೂಮಿಗಳಿಗೆ ಭೇಟಿ ನೀಡಿ

ಪರಿಶೀಲಿಸಲಾಗುವುದು, ಶಾಸಕರ ನಿಧಿಯಿಂದ ಸ್ಮಶಾನ ಅಭಿವೃದ್ಧಿಗೆ 20 ಲಕ್ಷ ರೂಪಾಯಿ ಅನುದಾನ ಬಂದಿದೆ. ಸ್ಪಷ್ಟ ದಾಖಲೆಗಳಿರುವ ಇಟ್ಟಿಗೆ, ಶಿವ ನಗರದಲ್ಲಿ ಶೀಘ್ರದಲ್ಲಿ ವ್ಯವಸ್ಥಿತವಾದ ಮುಕ್ತಿಧಾಮ ನಿರ್ಮಿಸಲಾಗುವುದು ಎಂದು ಬಿ.ಕಣಬೂರು ಗ್ರಾಮ ಪಂಚಾಯಿತಿ ಪಿಡಿಒ ಕಾಶಪ್ಪ ಮಾಧ್ಯಮಕ್ಕೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಕೃಪೆ: ಶಿವಾನಂದ ಭಟ್.