ಚಿಕ್ಕಮಗಳೂರು:- ಜಿಲ್ಲೆಯ ನರಸಿಂಹರಾಜಪುರದ ಐತಿಹಾಸಿಕ ಮಾರಿಕಾಂಭ ಜಾತ್ರೆಯು 2025ರ ಮೇ ತಿಂಗಳ 20ರಿಂದ ಮೂರು ದಿನಗಳ ಕಾಲ ಸರ್ವ ಜನರ ಸಹಕಾರದೊಂದಿಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ನರಾಪುರ ಶ್ರೀ ಕೋಟೆ ಮಾರಿಕಾಂಭೆ ಜಾತ್ರಾ ಸಮಿತಿಯ ಅಧ್ಯಕ್ಷ ಪಿ ಆರ್ ಸದಾಶಿವ ಹೇಳಿದ್ದಾರೆ.
ಅವರು ಇಂದು ನರಾಪುರದ ಪತ್ರಿಕಾ ಭವನದಲ್ಲಿ ಜಾತ್ರೋತ್ಸವದ ಪತ್ರಿಕಾಗೋಷ್ಠಿ ನಡೆಸಿ, ಮೂರು ದಿನಗಳ ಕಾಲ ನಡೆಯುವ ಜಾತ್ರಾ ಕಾರ್ಯಕ್ರಮದ ಬಗ್ಗೆ ವಿವರ ಮಾಹಿತಿ ನೀಡಿದರು.
ನಗರದ ಸುಂಕದಕಟ್ಟೆಯ ಬಳಿಯ ಮಾರಿ ಮನೆಯಲ್ಲಿ ಮಾರಮ್ಮನ ವಿಗ್ರಹ ಕೆತ್ತನೆ ಮಾಡಿ ಮೇ 20ರ ಮಂಗಳವಾರದಂದು ಪೂಜಾ ಕಾರ್ಯ ನೆರವೇರಿಸಿ, ನಂತರ ದೃಷ್ಟಿ ಬೊಟ್ಟು (ಜೀವ ಕಳೆ ತುಂಬುವುದು) ಇರಿಸಿ ಮಡಿಲು ತುಂಬಿಸಿ ಸಮಿತಿಯವರಿಗೆ ಅಧಿಕೃತವಾಗಿ ದೇವಿಯನ್ನು ಹಸ್ತಾಂತರಿಸಲಾಗುವುದು, ದೃಷ್ಟಿಬೊಟ್ಟು ಇಡುವ ಸಂದರ್ಭ ಒಂದು ವಿಶೇಷ ಕ್ಷಣವಾಗಿರುತ್ತದೆ.
ಈ ಸಂದರ್ಭದಲ್ಲಿ ದೇವಿಯ ಮುಂಭಾಗ ಸುಮಾರು 60- 70 ಅಡಿ ದೂರದಲ್ಲಿ ಇರಿಸಲಾದ ಹುಲ್ಲಿಗೆ ದೇವಿಯ ದಿವ್ಯದೃಷ್ಟಿಯಿಂದ ಬೆಂಕಿ ಬೀಳುವುದು. ಇದನ್ನು ನೋಡಲು ಸಾವಿರಾರು ಜನ ಭಾಗವಹಿಸಿ, ಕಣ್ತುಂಬಿಕೊಳ್ಳುವರು ಎಂದರು.
ಮಾರಮ್ಮನನ್ನು ಅಗ್ರಹಾರದ ಉಮಾಮಹೇಶ್ವರಿ ದೇವಸ್ಥಾನದ ಮಾರಿಯ ಗದ್ದುಗೆ ಕರೆತಂದು, ಅಲ್ಲಿ ಬ್ರಾಹ್ಮಣ ಸಮಾಜದವರು ಪೂಜಿಸಿ ಮಡಿಲಕ್ಕಿ ತುಂಬುವರು, ನಂತರ ಎಲ್ಲಾ ವರ್ಗದ ಜನರು, ಹಳ್ಳಿಯ ಜನರು, ಮಡಿಲಕ್ಕಿ ಸಲ್ಲಿಸಿ ಪೂಜೆ ಸಲ್ಲಿಸುವರು. ರಾತ್ರಿ 9ರ ವೇಳೆಗೆ ಮಾರಮ್ಮನ ಭವ್ಯ ಮೆರವಣಿಗೆ ಮೂಲಕ ಪ್ರವಾಸಿ ಮಂದಿರದ ಬಳಿ ಇರುವ ಮಾರಿಗುಡಿಯ ಗದ್ದುಗೆಗೆ ಬುಧವಾರ ಬೆಳಗಿನ ಜಾವ 4:30 ರಿಂದ 5 ಗಂಟೆಯ ವೇಳೆಗೆ ಕರೆತರಲಾಗುವುದು.
ಮೆರವಣಿಗೆ ಉದ್ದಕ್ಕೂ ರಾಜ್ಯದ ವಿವಿಧ ಪ್ರಸಿದ್ಧ ಕಲಾತಂಡಗಳಿಂದ ವಿಶೇಷ ಆಕರ್ಷಣೀಯ ಸಾಂಸ್ಕೃತಿಕ ಕಾರ್ಯಕ್ರಮಗಳು,ಸಿಡಿಮದ್ದು ಪ್ರದರ್ಶನ, ವಿವಿಧ ಬಾಣ ಬಿರುಸು ಕಾರ್ಯಕ್ರಮಗಳು ನಡೆಯಲಿದೆ ಎಂದರು. ನಂತರ ಗದ್ದುಗೆಗೆ ಬಂದ ನಂತರ ಗ್ರಾಮಸ್ಥರಿಂದ, ಭಕ್ತಾದಿಗಳಿಂದ, ಹರಕೆ ಸೇವೆಗಳು,ಬಲಿ ಪೂಜೆ ನಡೆಯಲಿವೆ.
21ರ ಬುಧವಾರ ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಉದ್ಘಾಟಿಸಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷರಾದ ಎಂ ಶ್ರೀನಿವಾಸ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಡಾ|| ಕೆ.ಪಿ ಅಂಶುಮಂತ್ ಅಧ್ಯಕ್ಷರು ಭದ್ರ(ಕಾಡ )ಕರ್ನಾಟಕ ಸರ್ಕಾರ, ಮಾಜಿ ಸಚಿವ ಡಿ.ಎನ್ ಜಿವರಾಜ್, ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ಹೆಚ್.ಎನ್ ರವಿಶಂಕರ್, ಪ್ರಶಾಂತ್ ಎಲ್ ಶೆಟ್ಟಿ, ಪಿ ಆರ್ ಸುಕುಮಾರ್ ಹಾಗೂ ವಿಶೇಷ ಆಹಾನ್ವಿತರಾಗಿ ಬೆಂಗಳೂರಿನ ವಕೀಲರು ಹಾಗೂ ಉದ್ಯಮಿ ಗದ್ದೆಮನೆ ವಿಶ್ವನಾಥ್( ಶಶಿ), ಕಣಿವೆಯ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷರಾದ ಕಣಿವೆ ವಿನಯ್, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿರುವರು, ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿ ಅಧ್ಯಕ್ಷ ಪಿ ಆರ್ ಸದಾಶಿವ ವಹಿಸಲಿದ್ದಾರೆ.
22ರ ಗುರುವಾರ ಬೆಳಗ್ಗೆಯಿಂದ ಶ್ರೀದೇವಿಗೆ ಪೂಜೆ, ಹರಕೆ ಸೇವೆ ನಡೆಯುವುದು, ಮಧ್ಯಾಹ್ನ ಸರ್ವ ಜನರಿಗೂ ಹರಕೆಯ ಅನ್ನ ಸಂತರ್ಪಣ ಕಾರ್ಯಕ್ರಮ ನಡೆಯಲಿದೆ. ನಂತರ ಸಂಜೆ 6 ಗಂಟೆಗೆ ಶ್ರೀದೇವಿಯ ವಿಸರ್ಜನಾ ಅಂಗವಾಗಿ ಧಾರ್ಮಿಕ ಸಭೆ ನಡೆಯುವುದು. ಸಭೆಯ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಡಾ|| ಶ್ರೀ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ಪೀಠಾಧಿಪತಿಗಳು, ನಾರಾಯಣಗುರು ಶಕ್ತಿಪೀಠ ಚಿತ್ತಾಪುರ. ಉದ್ಘಾಟಕರಾಗಿ ಎಂ ಶ್ರೀನಿವಾಸ್, ಅತಿಥಿಗಳಾಗಿ ವಿವಿಧ ದೇವಾಲಯ ಸಮಿತಿಯ ಅಧ್ಯಕ್ಷರಾದ ಡಿ ಸಿ ದಿವಾಕರ್, ಕೆ.ಪಿ ಸುರೇಶ್ ಕುಮಾರ್, ಎಚ್ ಎನ್ ರವಿಶಂಕರ್, ಪ್ರವೀಣ್ ಆರ್, ರವಿಕುಮಾರ್, ಮಂಜುನಾಥ ಪೆರುಮಾಳ್, ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದ, ಉಪಾಧ್ಯಕ್ಷೆ ಉಮಾ ಕೇಶವ್, ಇತರರು ಉಪಸ್ಥಿತರಿರುವರು. ಪ್ರತಿದಿನ ಸಂಗೀತ ಸಂಜೆ, ಆರ್ಕೇಸ್ಟ್ರಾ ಸಂಗೀತ ವೈಭವ ಕಾರ್ಯಕ್ರಮ ನಡೆಯಲಿದೆ. ಮೂರು ದಿನವು ನಿರಂತರವಾಗಿ ಅನ್ನ ಸಂತರ್ಪಣೆ ನಡೆಯಲಿದೆ. ಈ ದೇವಿಯ ಕಾರ್ಯಕ್ರಮಕ್ಕೆ ಹಳ್ಳಿಯ ಗ್ರಾಮಸ್ಥರು,ಪಟ್ಟಣದವರೆಲ್ಲರೂ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾರಿಕಾಂಬ ಜಾತ್ರೋತ್ಸವದ ಸಮಿತಿಯ ಉಪಾಧ್ಯಕ್ಷರುಗಳಾದ ನಾಗರಾಜ್ (ನಾಗಿ), ಹಳೆಪೇಟೆ ಸುನಿಲ್ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಎಚ್ ಎನ್ ರವಿಶಂಕರ್, ಕಾರ್ತಿಕ್, ಖಜಾಂಜಿ ಕೃಷ್ಣಮೂರ್ತಿ ಇತರರು ಉಪಸ್ಥತರಿದ್ದರು.