ಬೆಂಗಳೂರು

ಮೇ 25ರಂದು ಸಿಎಂ ಮತ್ತು ಸ್ಪೀಕರ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಅಮಾನತುಗೊಂಡಿರುವ ಶಾಸಕರ ಕುರಿತು ಸಭೆ  

ಬೆಂಗಳೂರು:- ಮೇ 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ನೇತೃತ್ವದಲ್ಲಿ ಬಿಜೆಪಿ ಪಕ್ಷದ 18 ಶಾಸಕರ ಅಮಾನತುಗೊಂಡಿರುವ ಕುರಿತು ತೀರ್ಮಾನ ಮಾಡಲು ಸಭೆ ನಡೆಯಲಿದೆ ಎಂದು ಸಚಿವ ಎಚ್.ಕೆ.ಪಾಟೀಲ್‌ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಶಾಸಕರ ಅಮಾನತುಗೊಂಡಿರುವ ಬಗ್ಗೆ ಚರ್ಚೆ ನಡೆದಿದ್ದು, ಮುಖ್ಯಮಂತ್ರಿಗಳಿಗೆ ತೀರ್ಮಾನ ಮಾಡಲು ಅಧಿಕಾರ ನೀಡಲಾಗಿದೆ. ಮೇ 25ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ, ಸಭಾಧ್ಯಕ್ಷ, ಪ್ರತಿಪಕ್ಷ ನಾಯಕರು ಮತ್ತು ಕಾನೂನು ಮತ್ತು ಸಂಸದೀಯ ಸಚಿವರು ಸೇರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೆಚ್ ಕೆ ಪಾಟೀಲರು ತಿಳಿಸಿದರು.

ಈ ನಡುವೆ, ಬಿಜೆಪಿ ಪಕ್ಷದ ನಾಯಕರು, ಶಾಸಕರ ಅಮಾನತುಗೊಂಡ ಆದೇಶವನ್ನು ವಾಪಸ್ ಪಡೆಯಲು ಸ್ಪೀಕರ್‌ ಯು.ಟಿ.ಖಾದರ್‌ ಅವರನ್ನು ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಬಿಜೆಪಿ ನಾಯಕ ಆರ್.ಅಶೋಕ್‌ ನೇತೃತ್ವದಲ್ಲಿ ಶಾಸಕರು ವಿಧಾನಸೌಧದಲ್ಲಿ ಸ್ಪೀಕರ್ ಕಚೇರಿಗೆ ತೆರಳಿ ಚರ್ಚೆ ನಡೆಸಿದರು. ಅವರು, ವಿಧಾನಸಭೆಯಲ್ಲಿ ನಡೆದ ಘಟನೆಗಳು ಸೀಮಿತವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

ಈ ಘಟನೆಗಳು ಹಿಂದೆಯೂ ನಡೆದಿದ್ದರೂ, ಶಾಸಕರಿಗೆ ಅಗೌರವ ತೋರುವ ಉದ್ದೇಶ ಇರಲಿಲ್ಲ ಎಂದು ಅವರು ಹೇಳಿದರು. ಸ್ಪೀಕರ್ ಖಾದರ್‌ ಅವರು ಈ ಬಗ್ಗೆ ಪರಿಶೀಲನೆ ನಡೆಸಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೊಂದಿಗೆ ಚರ್ಚಿಸುವ ಭರವಸೆ ನೀಡಿದ್ದರು. ವಿಧಾನಸಭೆ ಅಧಿವೇಶನ ಸಂದರ್ಭದ ಕೊನೆಯ ದಿನದಂದು ಅಮಾನತು ಘಟನೆ ನಡೆದಿತ್ತು.

ಅಂದು ನಡೆದಿದ್ದು:

ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 4 ರಷ್ಟು ಮೀಸಲಾತಿ ನೀಡಿರುವುದನ್ನು ವಿರೋಧಿಸಿ ಮತ್ತು ಸಹಕಾರ ಸಚಿವ ಕೆ ಎನ್ ರಾಜಣ್ಣ ವಿರುದ್ದದ ಹನಿಟ್ರ್ಯಾಪ್ ಪ್ರಯತ್ನದ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ವಿರೋಧ ಪಕ್ಷ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೆಲವು ಬಿಜೆಪಿ ಶಾಸಕರು ಸ್ಪೀಕರ್ ಕುರ್ಚಿ ಇರುವ ವೇದಿಕೆಯ ಮೇಲೆ ಹತ್ತಿ ಅದನ್ನು ಸುತ್ತುವರೆದರು. ಸದನದ ಬಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕೆಲವು ಶಾಸಕರು ಸ್ಪೀಕರ್ ಮೇಲೆ ಕಾಗದಗಳನ್ನು ಎಸೆದರು. ಸ್ಪೀಕರ್ ಕುರ್ಚಿಯನ್ನು ಸುತ್ತುವರೆದಿದ್ದ ಬಿಜೆಪಿ ಶಾಸಕರನ್ನು ಮಾರ್ಷಲ್ ಅವರು ಬಲವಂತವಾಗಿ ಹೊರಹಾಕಿದ್ದರು.