ಬೆಂಗಳೂರು:- ಪಹಲ್ಗಾಮ್ ಘಟನೆಯ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೌದಿ ಅರೇಬಿಯಾದಿಂದ ವಾಪಸ್ ಬಂದರು, ಬಿಹಾರಕ್ಕೆ ಹೋಗಿ ಚುನಾವಣಾ ಭಾಷಣ ಮಾಡಿದರು. ಆದರೆ, ಆಲ್ ಪಾರ್ಟಿ ಮೀಟಿಂಗ್‌ಗೆ ಬರಲಿಲ್ಲ. ಒಂದು ಸುದ್ದಿಗೋಷ್ಠಿ ಕೂಡ ನಡೆಸಲಿಲ್ಲ. ಇದು ದೇಶಕ್ಕೆ ಯಾವ ಸಂದೇಶ ಕೊಡುತ್ತದೆ ಎಂದರಲ್ಲದೆ ಎಲ್ಲರಿಗಿಂತಲೂ ಮೋದಿ ಸುಪ್ರೀಂ ಎಂದು ಭಾವಿಸಿದ್ದಾರೆಯೇ? ಎಂದು ಸಚಿವರಾದ ಸಂತೋಷ್ ಲಾಡ್ ತೀವ್ರವಾಗಿ ಟೀಕಿಸಿದ ಅವರು ಕದನ ವಿರಾಮ ಘೋಷಣೆಯನ್ನು ವಿರೋಧಿಸಿದರು.
ಪಾಕಿಸ್ತಾನ ಕದನ ವಿರಾಮ ಘೋಷಣೆಯಾದ ನಂತರವೂ ನಮ್ಮ ಮೇಲೆ ದಾಳಿ ಮಾಡಿತು. ಇದರ ಬಗ್ಗೆ ಯಾಕೆ ಚರ್ಚೆಯಾಗಲಿಲ್ಲ. ಸೌದಿ ಅರೇಬಿಯಾದಲ್ಲಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನೇ ಕದನ ವಿರಾಮ ಮಾಡಿಸಿದೆ ಎಂದು ಪದೇಪದೆ ಹೇಳಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದೊಂದಿಗೆ ವ್ಯಾಪಾರ ಮಾಡುವುದಾಗಿ ಹೇಳಿ ಕದನ ವಿರಾಮ ಘೋಷಿಸಲು ಕಾರಣವಾಗಿದ್ದೇನೆ ಎಂದು ಟ್ರಂಪ್ ಹೇಳಿಕೊಂದಿದ್ದಾರೆ. ಆದರೆ, ಪ್ರಧಾನಮಂತ್ರಿ ಮೋದಿ ಈ ಬಗ್ಗೆ ಏಕೆ ಮೌನವಾಗಿದ್ದಾರೆ? ಎಂದು ಆಕ್ಷೇಪಿಸಿದರು.
140 ಕೋಟಿ ಜನರು ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದು ಬಯಸಿದ್ದರು. ಆದರೆ, ಟ್ರಂಪ್ ಹೇಳಿದಂತೆ ಭಾರತ ಕೇಳುತ್ತಿದೆ. ಬಿಜೆಪಿಯವರು ತಿರಂಗಾ ಯಾತ್ರೆ ಬಿಟ್ಟು ಟ್ರಂಪ್ ಯಾತ್ರೆ ಮಾಡಲಿ. 11 ವರ್ಷಗಳಿಂದ ಮೋದಿಯವರದ್ದೇ ಕ್ಯಾಮರಾ, ಅವರು ಹೇಳಿದ್ದೇ ಮಾತು. ಪಂಚಾಯತಿಯಿಂದ ಸಂಸತ್‌ವರೆಗೆ ಅವರನ್ನೇ ತೋರಿಸಲಾಗುತ್ತಿದೆ. ಇದು ಪಬ್ಲಿಸಿಟಿಗಾಗಿ ಯುದ್ಧವನ್ನೇ ಮಾಡಿದಂತಿದೆ. ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಅನಿಸುತ್ತಿಲ್ವಾ? ಎಂದು ತೀಕ್ಷ್ಣವಾಗಿ ಟೀಕಿಸಿದರು.
ಪಾಕಿಸ್ತಾನ ಶರಣಾಗಿದೆ ಎಂದು ಮೋದಿ ಹೇಳಿದ್ದಾರೆ. ಆದರೆ, ಕದನ ವಿರಾಮಕ್ಕೆ ಯಾಕೆ ಒಪ್ಪಿಕೊಳ್ಳಬೇಕು? ಘೋಷಣೆ ಮಾಡುವ ಮುಂಚೆ ಜನರ ಅಭಿಪ್ರಾಯ ಕೇಳಬೇಕಾಗಿಲ್ಲವೇ? ಯುದ್ಧವಾಗಬೇಕು, ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂದು ದೇಶದ ಜನರು ಬಯಸಿದ್ದರು. ಆದರೆ, ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಕ್ಕೆ ಸರಿಯಾದ ಕಾರಣವನ್ನು ಪ್ರಧಾನಮಂತ್ರಿಗಳು ತಿಳಿಸಬೇಕು ಎಂದು ಒತ್ತಾಯಿಸಿದರು.