ಬೆಂಗಳೂರು:- ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ಬಿಜೆಪಿ ಘಟಕದ ರಾಜ್ಯಾಧ್ಯಕ್ಷರ ನೇಮಕ ಆಗಲಿದೆ, ಹಿರಿಯ ನಾಯಕರ ವಿರೋಧದ ನಡುವೆಯೇ ಬೇರೊಬ್ಬರನ್ನು ನೇಮಕ ಆಗಲಿದೆಯಾ ಎಂಬ ಚರ್ಚೆಯೂ ನಡೆಯುತ್ತಿದೆ. ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತಿದೆ.
ಹಲವು ತಿಂಗಳುಗಳ ಬಳಿಕ ಬಿ.ಎಸ್.ಯಡಿಯೂರಪ್ಪ ಮತ್ತೆ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಹೀಗಾಗಿ ಪುತ್ರ ವಿಜಯೇಂದ್ರರನ್ನೇ ಮುಂದುವರೆಸುವ ಸಂಭವ ಇರಬಹುದು ಎನ್ನಲಾಗಿದೆ. ಒಂದು ವೇಳೆ ಯಡಿಯೂರಪ್ಪರನ್ನು ಕಡೆಗಣಿಸಿದರೆ, ಭಿನ್ನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಹೆಚ್ಚು, ಹೀಗಾದರೆ ಕೆಜೆಪಿಯಿಂದ ಬಿಜೆಪಿಗೆ ಆದ ನೆನಪು ಕಾಡಬಹುದು ಜೊತೆಗೆ ಪಕ್ಷ ಸಂಘಟನೆಗೆ ಧಕ್ಕೆ ಆಗಲಿದೆ ಅನ್ನೋ ಆತಂಕವೂ ವರಿಷ್ಠರಲ್ಲಿ ಮನೆ ಮಾಡಿದೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಬಳಿಕವೂ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದೇ ಕಾರಣಕ್ಕಾಗಿ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಇತರೆ ನಾಯಕರನ್ನು ಸಮಾಧಾನಪಡಿಸುವ ಕೆಲಸಗಳು ಆಗುತ್ತಿವೆ. ಬಿಎಸ್ವೈ ಅವರನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇತರೆ ನಾಯಕರನ್ನೂ ಸೈಲೆಂಟ್ ಮಾಡಲು ಆಗ್ತಿಲ್ಲ. ಯಡಿಯೂರಪ್ಪ, ವಿಜಯೇಂದ್ರ ವಿರೋಧ ಬಣ, ಹೈಕಮಾಂಡ್ಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.