ವಿಜಯಪುರ

ಯತ್ನಾಳ್ ಸವಾಲ್ ಸ್ವೀಕರಿಸಿ ರಾಜೀನಾಮೆ ನೀಡಿದ ಶಿವಾನಂದ ಪಾಟೀಲ್

ವಿಜಯಪುರ:- ವಿಜಯಪುರ ನಗರ ಶಾಸಕರಾದ ಬಸವನಗೌಡ ಪಾಟೀಲ ಯತ್ನಾಳ್ ಅವರು ತಮ್ಮ ವಿಜಯಪುರ ಮತಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ನನ್ನ ವಿರುದ್ಧ ಬಸವನ ಬಾಗೇವಾಡಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಸವಾಲು ಹಾಕಿದ್ದರು.
ನಾನು ಅವರ ಸವಾಲನ್ನು ಸ್ವೀಕರಿಸಿ, ಅವರ ವಿರುದ್ಧ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ, ಹಾಗಾಗಿ ನಾನು ಪ್ರತಿನಿಧಿಸುತ್ತಿರುವ ಬಸವನ ಬಾಗೇವಾಡಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಆದುದರಿಂದ, ಶ್ರೀ ಬಸವನಗೌಡ ಆರ್.ಪಾಟೀಲ್ ಯತ್ನಾಳ್ ಅವರು ಸವಾಲು ಹಾಕಿರುವಂತೆ ಅವರ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಅವರ ರಾಜೀನಾಮೆ ಅಂಗೀಕಾರವಾದರೆ ಮಾತ್ರ ದಯಮಾಡಿ ನನ್ನ ರಾಜೀನಾಮೆಯನ್ನೂ ಅಂಗೀಕರಿಸುವಂತೆ ತಮ್ಮಲ್ಲಿ ಕೋರುತ್ತೇನೆ ಎಂದು ಶಿವಾನಂದ ಪಾಟೀಲ್ ಅವರು ಯು.ಟಿ. ಖಾದರ್​ಗೆ ನೀಡಿದ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅವರಪ್ಪನಿಗೆ ಹುಟ್ಟಿದ್ದರೆ ಸಚಿವ ಶಿವಾನಂದ ಪಾಟೀಲ್​ ನನ್ನ ವಿರುದ್ಧ ಸ್ಪರ್ಧೆ ಮಾಡಿ ಗೆಲ್ಲಲಿ. ಅವರ ಮನೆತನದ ಹೆಸರು ಪಾಟೀಲ ಅಲ್ಲ, ಹಚಡದ ಅಂತ ಇತ್ತು. ರಾಜಕೀಯ ಲಾಭಕ್ಕಾಗಿ ಪಾಟೀಲ್​ ಎಂದು ಬದಲಾಯಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಶಿವಾನಂದ ಪಾಟೀಲ್​, ಯತ್ನಾಳ್​ ವಿರುದ್ಧ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಆಸೆ ಇದೆ ಎಂದಿದ್ದರು. ಹೀಗಾಗಿ ಯತ್ನಾಳ್​ ಸವಾಲು ಹಾಕಿದ್ದರು. ಇದೀಗ ಪಾಟೀಲ್​ ಕೂಡ ಸವಾಲು ಸ್ವೀಕರಿಸಿ ರಾಜೀನಾಮೆ ನೀಡಿದ್ದಾರೆ.

ಅಪ್ಪನಿಗೆ ಹುಟ್ಟಿದ್ದರೆ ಶುಕ್ರವಾರದೊಳಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದರು. ಅದನ್ನು ಸ್ವೀಕರಿಸಿ ಸ್ಪೀಕರ್ ಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಯತ್ನಾಳ್ ಕೂಡ ರಾಜೀನಾಮೆ ಸಲ್ಲಿಸಿ, ಹಿರೇಬಾಗೆವಾಡಿ ಅಥವಾ ವಿಜಯಪುರ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಶಿವಾನಂದ ಪಾಟೀಲ್ ಪ್ರತಿ ಸವಾಲು ಹಾಕಿದರು‌.

ಕ್ಷೇತ್ರದ ಆಯ್ಕೆ ಅವರ ಇಚ್ಛೆಗೆ ಬಿಟ್ಟಂತೆ ರಾಜೀನಾಮೆಗೂ ಗಡುವು ನೀಡುವುದಿಲ್ಲ. ಅವರ ವಿವೇಚನೆಯಂತೆ ಬೇಕಿದ್ದ ದಿನ ರಾಜೀನಾಮೆ ನೀಡಲಿ. ಯತ್ನಾಳ್ ರ ಸವಾಲು ಸ್ವೀಕರಿಸಿದ್ದೇನೆ ಎನ್ನುವುದಕ್ಮೆ ಈ ನಿರ್ಧಾರ ಕೈಗೊಂಡಿರುವೆ ಎಂದು ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿಲ್ಲ, ಇದು ನನ್ನ ವೈಯಕ್ತಿಕ ನಿರ್ಧಾರ. ಶಾಸಕ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರವಾದರೆ ಸಚಿವ ಸ್ಥಾನ ಹೋಗುತ್ತದೆ, ಇದು ಸಹಜ. ವೈಯಕ್ತಿಕ ಘನತೆ-ಗೌರವಕ್ಕಿಂತ ಅಧಿಕಾರ ಮುಖ್ಯವಲ್ಲ ಎಂದು ಶಿವಾನಂದ ಪಾಟೀಲ ಸ್ಪಷ್ಟಪಡಿಸಿದರು.