Uncategorized

ಕಾರ್ಯಕರ್ತರಿಗೆ ಸ್ಪಂದಿಸದ ಕಾಂಗ್ರೆಸ್: ತಳಮಟ್ಟದಲ್ಲಿ ತತ್ತರ.!!?

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ತನ್ನದೆಯಾದ ದಾಖಲೆಯನ್ನು ಸೃಷ್ಟಿಸಿ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷದಲ್ಲಿ ಇಂದು ಸ್ಟಾರ್ ಪ್ರಚಾರಕ ನಾಯಕರ ಕೊರತೆ ಎದ್ದು ಕಾಣುತ್ತಿದ್ದು, ಕೇವಲ ಹೆಸರು ಸೂಚಿಸುವ ಪಕ್ಷವಾಗಿ ಹೊರ ಹೊಮ್ಮಿದೆ.
ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಮಾಡಿಕೊಂಡು ಬಂದ ನಾಯಕರು ರಾಜ್ಯ ಮಟ್ಟದಲ್ಲಿ ಸೋಲುತ್ತಾರೆ ಎನ್ನುವುದಾದರೆ ಅವರ ವರ್ಚಸ್ಸಿಗೇನು ಬೆಲೆ ಬಂತು ಎಂಬ ಪ್ರಶ್ನೆ ಕಾಂಗ್ರೆಸ್ ಪಕ್ಷದ ಯುವ ನಾಯಕರ ನಿದ್ದೆಗೆಡಿಸಿರುವುದಲ್ಲದೆ ತಮ್ಮ ನಾಯಕರ ಹೆಸರು ಹೇಳಲು ಹಿಂಜರಿಕೆಯಾಗುವುದನ್ನು ಇತ್ತೀಚಿಗೆ ಕಾಣುತ್ತಿದ್ದೇವೆ. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಆಡಳಿತದಲ್ಲಾಗಿರುವ ವಿಫಲತೆ, ದೇಶಕ್ಕೆ ಆಗಿರುವ ಕೆಲವೊಂದು ಅನ್ಯಾಯಗಳ ಬಗ್ಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ, ಕಾಂಗ್ರೆಸ್ ಪಕ್ಷವನ್ನು ಖಳನಾಯಕನನ್ನಾಗಿ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿ ನಾಗಲೋಟಕ್ಕೇರಿದೆ.
ಕಾಂಗ್ರೆಸ್ ಸಾಮಾಜಿಕ ಜಾಲವನ್ನು ಬಳಸಿಕೊಳ್ಳುವ ಮುನ್ನವೇ ಅದನ್ನು ಪ್ರಭಾವಶಾಲಿಯಾಗಿ ಮಾಡಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯ ಮೊದಲ ಹೆಜ್ಜೆ ಇಟ್ಟಿದೆ. ಕಾಂಗ್ರೆಸ್ ಇವತ್ತು ಏನೇ ಹೇಳಿದರೂ ಅದಕ್ಕೆ ಸರಿ ಸಮಾನವಾದ ಬಾಣ ಹೂಡಲು ಬಿಜೆಪಿ ನಾಯಕರು ಸದಾ ತಯಾರಿರುತ್ತಾರೆ. ಕಾಂಗ್ರೆಸ್ ನಾಯಕರ ಹೇಳಿಕೆಗಳು ಗಂಭೀರ ವಿಚಾರವಾಗಿ ಜನರನ್ನು ತಲುಪುವ ಮುನ್ನವೇ ಅದನ್ನು ಟ್ರೋಲ್ ಮಾಡಿ ಜನ ಅದನ್ನು ಗಂಭೀರವಾಗಿ ಪರಿಗಣಿಸದಂತೆ ಮಾಡುವಲ್ಲಿ ಬಿಜೆಪಿ ಪಡೆ ಸದಾ ತಯಾರಾಗಿರುತ್ತದೆ.
ಕಾಂಗ್ರೆಸ್ ಸತತ ಸೋಲು ಕಾಣುತ್ತಿರುವುದಕ್ಕೆ ತಳಮಟ್ಟದಲ್ಲಿ ಕೆಲಸ ಮಾಡುವ ನಿಷ್ಠಾವಂತ ಕಾರ್ಯಕರ್ತರು ಇದೀಗ ಬೇರೆ ಬೇರೆ ಪಕ್ಷಗಳಲ್ಲಿ ಹಂಚಿಹೋಗಿರುವುದು, ಕಾಂಗ್ರೆಸ್ ನಾಯಕರ ಕೆಲವೊಂದು ನಿಲುವುಗಳು ಕಾರ್ಯಕರ್ತರಲ್ಲಿ ನಿರಾಸಕ್ತಿ ತಂದಿದ್ದು, ಇದು ಪಕ್ಷದ ಬೆಳವಣಿಗೆಗೆ ಅಡ್ಡಲಾಗಿರುವುದು ಸತ್ಯ.
ಕೆಲವು ನಾಯಕರು ಕೇವಲ ಹೇಳಿಕೆ ನೀಡಲಷ್ಟೆ ಸೀಮಿತರಾಗುತ್ತಿದ್ದಾರೆ. ಪಕ್ಷದ ನಾಯಕತ್ವವನ್ನು ವಹಿಸಿಕೊಂಡು ಮುನ್ನಡೆಸಲು, ಇಡೀ ದೇಶ ಸುತ್ತಿ ಪಕ್ಷದ ಸಂಘಟನೆ ಮಾಡಲು ಯಾರೊಬ್ಬರು ತಯಾರಿಲ್ಲ.
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನ ವಹಿಸಿಕೊಂಡರೂ ಅವರ ಆಡಳಿತಾವಧಿಯಲ್ಲಿ ಹೇಳಿಕೊಳ್ಳುವ ಸಾಧನೆಯಾಗಿಲ್ಲ, ವಯಸ್ಸಿನ ಸಮಸ್ಯೆಗಳು ಅವರ ಕೆಲಸ ಕಾರ್ಯಗಳಿಗೆ ತೊಡಕಾಗುತ್ತಿದೆ.
ಇಡೀ ಪಕ್ಷದ ನೇತೃತ್ವ ವಹಿಸಿ ಸೋಲು-ಗೆಲುವು ಎಲ್ಲದರ ಹೊಣೆ ಹೊರುತ್ತೇನೆ ಎಂಬ ಧೈರ್ಯವನ್ನು ರಾಹುಲ್ ಗಾಂಧಿಯವರು ತೋರುತ್ತಿಲ್ಲ. 2019ಕ್ಕೆ ಹೋಲಿಸಿದರೆ 2024ರಲ್ಲಿ ಕಾಂಗ್ರೆಸ್ ಗೆ ಅಧಿಕ ಸ್ಥಾನಗಳು ಬಂದರೂ ಎಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ದೇಶವನ್ನಾಳಿದ ರಾಷ್ಟ್ರೀಯ ಪಕ್ಷ ನೂರರ ಗಡಿ ದಾಟಲು ಸಾಧ್ಯವಾಗಲಿಲ್ಲ.
ಕೆಲ ರಾಜ್ಯದ ವಿಧಾನ ಸಭಾ ಚುನಾವಣೆಗಳಲ್ಲಿ ಹೀನಾಯ ಸೋಲು ಅವರಿಗೆ ಮುಜುಗರ ತಂದಿದೆ. ಈ ಸೋಲಿಗೆ ಆಯಾಯ ರಾಜ್ಯದ ನಾಯಕರನ್ನು ಹೊಣೆ ಮಾಡಿದನ್ನು ಬಿಟ್ಟರೆ ವಿನಃ ರಾಷ್ಟ್ರಮಟ್ಟದ ನಾಯಕರು ಯಾರೂ ಸೋಲಿನ ಹೊಣೆ ಹೊತ್ತುಕೊಳ್ಳಲಿಲ್ಲ.
ಸ್ವಾರಸ್ಯವಾದ ವಿಚಾರವೆಂದರೆ ಸೋಲನ್ನು ಮತಯಂತ್ರದ ಮೇಲೆ ಹಾಕಿ ಕೈತೊಳೆದುಕೊಂಡು ಬಿಟ್ಟರು. ಇವತ್ತಿಗೂ ಕಾಂಗ್ರೆಸ್ ಮತಯಂತ್ರದ ಮೇಲೆ ರಾಷ್ಟ್ರಮಟ್ಟದಲ್ಲಿ ಅನುಮಾನ ವ್ಯಕ್ತಪಡಿಸುವುದು ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ. ಹಿರಿಯ ನಾಯಕರೆಲ್ಲರೂ ತಮ್ಮ, ತಮ್ಮ ಕ್ಷೇತ್ರಕ್ಕೆ ಹೋಗಿ ಒಂದಷ್ಟು ಸಮಯ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿ ಕಾರ್ಯಕರ್ತರನ್ನು ಒಟ್ಟಾಗಿ ಸೇರಿಸಿ ಅವರ ಕುಂದು ಕೊರತೆಗಳನ್ನು ಆಲಿಸಿ ಅದಕ್ಕೆ ಪರಿಹಾರ ರೂಪಿಸುವ ಕೆಲಸ ಮಾಡಿ ತಳಮಟ್ಟದಿಂದಲೇ ಕಾರ್ಯಕರ್ತರ ಪಡೆಯನ್ನು ಕಟ್ಟಬೇಕಾಗುತ್ತದೆ. ಆದರೆ, ಆ ಕೆಲಸ ಆದಂತೆ ಕಾಣಿಸುತ್ತಿಲ್ಲ. ಇನ್ನು 2024ರ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಇಂಡಿಕೂಟದ ಸಾರಥ್ಯ ವಹಿಸಿದ್ದ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ.
ಒಟ್ಟಾರೆಯಾಗಿ ಕಾರ್ಯಕರ್ತರಿಗೆ ಸ್ಪಂದಿಸದ ಕಾಂಗ್ರೆಸ್ ಪಕ್ಷ ತಳಮಟ್ಟದಲ್ಲಿ ತತ್ತರಿಸುವ ಹಂತಕ್ಕೆ ತಲುಪಿದೆ.