ಬೆಂಗಳೂರು:- ಆಡಳಿತ ಪಕ್ಷಗಳು ದಾರಿ ತಪ್ಪಿದಾಗ ಎಚ್ಚರಿಸಿ ಸರಿದಾರಿಯಲ್ಲಿ ಹೋಗುವಂತೆ ಎಚ್ಚರಿಸುವ ಕೆಲಸವನ್ನು ವಿಪಕ್ಷಗಳು ಮಾಡಬೇಕಾಗುತ್ತದೆ. ಆದರೆ, ಕರ್ನಾಟಕ ರಾಜ್ಯದಲ್ಲಿ ವಿಪಕ್ಷವಾದ ಬಿಜೆಪಿ ಸಂಪೂರ್ಣವಾಗಿ ವಿಫಲವಾಗಿವೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಬಿರುಗಾಳಿಯಂತೆ ಬೀಸಿದೆ. ರಾಜ್ಯದಲ್ಲಿ ಪ್ರಬಲ ವಿರೋಧ ಪಕ್ಷಗಳಿಲ್ಲದ ಕಾರಣ ಮತ್ತು ವಿಪಕ್ಷಗಳ ದೌರ್ಬಲ್ಯಗಳು ಆಡಳಿತ ಪಕ್ಷದವರಿಗೆ ವರಪ್ರಸಾದವಾಗಿದೆ. ಇವತ್ತು ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾಗಿರುವುದರಿಂದ ಆಡಳಿತ ಪಕ್ಷವನ್ನು ಕಟ್ಟಿಹಾಕಲು ಅವಕಾಶವಿದೆ. ಆದರೆ, ಇಲ್ಲಿ ಅದು ಅಗದಿರುವುದು ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಆಡಳಿತ ಪಕ್ಷದವರು ಸಿಎಂ, ಸಚಿವ ಸ್ಥಾನಗಳಿಗೆ ಕಚ್ಚಾಡುವುದು ಮಾಮೂಲಿ. ಆದರೆ, ರಾಜ್ಯದ ರಾಜಕೀಯದ ದುರಂತ ಏನೆಂದರೆ ವಿಪಕ್ಷದಲ್ಲಿದ್ದವರು ಕಚ್ಚಾಡಿಕೊಂಡು ಪಕ್ಷವೊಂದು ಮೂರು ಬಾಗಿಲು ಎಂಬಂತೆ ಆಗಿರುವುದು ಬೇಸರದ ಸಂಗತಿ. ವಿಪಕ್ಷದಲ್ಲಿ ಒಗ್ಗಟ್ಟು ಇಲ್ಲದಿರುವುದು ಮತ್ತು ತಮ್ಮದೇ ಪಕ್ಷದ ನಾಯಕರ ವಿರುದ್ಧ ಆರೋಪ, ಟೀಕೆಗಳನ್ನು ಮಾಡುತ್ತಾ ಓಡಾಡುತ್ತಿರುವುದು ವಿಪಕ್ಷ ಅದರಲ್ಲೂ ಸಂಘ ಪರಿವಾರದ ಹಿಡಿತದಲ್ಲಿರುವ ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುತ್ತಿರುವ ಬಿಜೆಪಿಗೆ ದೊಡ್ಡ ಅವಮಾನ ಎನ್ನುವುದರಲ್ಲಿ ಸಂದೇಹವಿಲ್ಲ.
ಗ್ಯಾರಂಟಿ ಯೋಜನೆಯನ್ನು ಮುಂದಿಟ್ಟುಕೊಂಡು ಬೇರೆ, ಬೇರೆ ವಲಯಗಳಿಂದ ತೆರಿಗೆ ಮತ್ತು ಬೆಲೆ ಏರಿಕೆ ಮೂಲಕ ಸಂಪನ್ಮೂಲಗಳನ್ನು ಕ್ರೊಢೀಕರಣದಲ್ಲಿ ತೊಡಗಿಕೊಂಡಿರುವುದು ಗುಟ್ಟಾಗಿಯೇನು ಉಳಿದಿಲ್ಲ. ಬರೆಯ ಮೇಲೆ ಬರೆ, ಶಾಕ್ ಮೇಲೆ ಶಾಕ್.! ಇದರ ಪರಿಣಾಮಗಳಿಂದ ಜನಸಾಮಾನ್ಯರ ಜೇಬು ಸಂಪೂರ್ಣವಾಗಿ ಸುಟ್ಟು ಖಾಲಿ ಖಾಲಿಯಾಗಿದೆ. ಕಳೆದೊಂದು ವರ್ಷದಲ್ಲಿ ಸುಮಾರು ಹದಿನಾರಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಜೊತೆಗೆ ವಿದ್ಯುತ್, ಬಸ್, ನೋಂದಣಿ, ಕಂದಾಯ, ನೀರಿನ ದರ, ಮೆಟ್ರೊ, ಹಾಲು ಹೀಗೆ ಎಲ್ಲವೂ ಹೆಚ್ಚಾಗುತ್ತಲೇ ಹೋಗುತ್ತಿದೆ. ಇದರ ಪರಿಣಾಮಗಳು ಜನಸಾಮಾನ್ಯರು ಎದುರಿಸಲೇ ಬೇಕಾಗಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ಬೆಲೆ ಏರಿಕೆಯ ಆರೋಪಗಳನ್ನು ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇವತ್ತು ಬೆಲೆ ಇಳಿಕೆ ಮಾಡಿದ ಯಾವುದಾದರೂ ಒಂದು ಉದಾಹರಣೆ ಇದೆಯಾ? ಎಂದು ಜನ ಸಾಮಾನ್ಯರು ಪೇಚಾಡಿಕೊಳ್ಳುತ್ತಿದ್ದಾರೆ.
ಆಡಳಿತ ಪಕ್ಷದ ಕಿವಿ ಹಿಂಡಿಯುವ ಕೆಲಸವನ್ನು ವಿರೋಧ ಪಕ್ಷಗಳು ಮಾಡುತ್ತವೆಯಾ? ಅಥವಾ ಕಚ್ಚಾಡುವುದರಲ್ಲಿಯೇ ಮುಂದಿನ ಮೂರು ವರ್ಷಗಳನ್ನು ಮುಗಿಸಿ ಬಿಡುತ್ತವೆಯಾ ಗೊತ್ತಿಲ್ಲ, ಪ್ರಬಲ ವಿರೋಧ ಪಕ್ಷ ಬಿಜೆಪಿಯಲ್ಲಿನ ಗುಂಪುಗಾರಿಕೆ ಮತ್ತು ನಾಯಕರು ನಡೆದುಕೊಳ್ಳುತ್ತಿರುವ ರೀತಿ, ನೀತಿಗಳು ಅಸಹ್ಯ ಮೂಡಿಸುತ್ತಿವೆ. ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಎಲ್ಲವನ್ನು ಸರಿಪಡಿಸಿಕೊಂಡು ಮುನ್ನಡೆಯುವ ಯಾವುದೇ ಮುನ್ಸೂಚನೆ ಕಾಣಿಸದ ಕಾರಣ ವಿಪಕ್ಷ ದುರ್ಬಲವಾಗಿದೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಹಿ ಇಸ್ ಟ್ರೂಥ್.