ಹೈದರಾಬಾದ್:- ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ಬರೋಬ್ಬರಿ 884 ಕೋಟಿ ರೂಪಾಯಿ ಅಕ್ರಮ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆ ಸಿಬಿಐ ಕೋರ್ಟ್ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ, ಜೊತೆಗೆ 7 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದೆ.
ಜನಾರ್ದನ ರೆಡ್ಡಿ ಈಗಾಗಲೇ 3 ವರ್ಷ ಜೈಲಿನಲ್ಲಿ ಕಳೆದಿದ್ದು, ವಯಸ್ಸು ಮತ್ತು ಸೇವೆಯನ್ನು ಪರಿಗಣಿಸಿ ಶಿಕ್ಷೆ ಕಡಿಮೆ ಮಾಡಲು ಮನವಿ ಮಾಡಿದ್ದಾರೆ. ಆದರೆ, ಸಿಬಿಐ ವಿಶೇಷ ಕೋರ್ಟ್, ರೆಡ್ಡಿ ಮನವಿಯನ್ನು ತಿರಸ್ಕರಿಸಿದೆ. ಇದರಿಂದ ಜನಾರ್ದನ ರೆಡ್ಡಿಗೆ ಮತ್ತೆ ಜೈಲು ಫಿಕ್ಸ್ ಆದಂತಾಗಿದೆ.
ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಇಂದು (ಮೇ 06) ಬೆಳಗ್ಗೆ ಹೈದರಾಬಾದ್ ಗೆ ತೆರಳಿದ್ದರು. ಇನ್ನು ಏಳು ವರ್ಷ ನೀಡಿರುವ ಶಿಕ್ಷೆಯಲ್ಲಿ ಕಡಿಮೆ ಮಾಡಿ ಎಂದು ಅವರು ಕೋರ್ಟ್ಗೆ ಮನವಿ ಮಾಡಿದ್ದಾರೆ. ನಾನು ಈಗಾಗಲೇ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಬಂಧನದಲ್ಲಿ ಕಳೆದಿದ್ದೇನೆ. ನನ್ನ ವಯಸ್ಸು ಮತ್ತು ನಾನು ಮಾಡಿದ ಸಾರ್ವಜನಿಕ ಸೇವೆಯನ್ನು ಪರಿಗಣಿಸಿ. ಬಳ್ಳಾರಿ ಮತ್ತು ಗಂಗಾವತಿಯ ಜನರು ನನ್ನನ್ನು ಭಾರಿ ಬಹುಮತದಿಂದ ಆಯ್ಕೆ ಮಾಡಿದ್ದಾರೆ. ನಾನು ಸಾರ್ವಜನಿಕ ಸೇವೆಗೆ ಸಮರ್ಪಿತನಾಗಿದ್ದೇನೆ . ಸಾರ್ವಜನಿಕರಿಂದ ನನಗೆ ಸಿಗುವ ಬೆಂಬಲವು ಆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ದಯವಿಟ್ಟು ಶಿಕ್ಷೆ ಪ್ರಮಾಣವನ್ನು ಕಡಿಮೆ ಮಾಡಿ ಎಂದು ರೆಡ್ಡಿ ಕೋರ್ಟ್ಗೆ ಅಂಗಲಾಚಿದ್ದಾರೆ. ಆದರೆ, ಕೋರ್ಟ್ ನಿರಾಕರಿಸಿದೆ. ನಿಮಗೆ 10 ವರ್ಷಗಳ ಶಿಕ್ಷೆಯನ್ನು ಏಕೆ ನೀಡಬಾರದು? ನೀವು ಜೀವಾವಧಿ ಶಿಕ್ಷೆಗೆ ಅರ್ಹರು ಎಂದು ತಪರಾಕಿ ಹಾಕಿ ರೆಡ್ಡಿ ಮನವಿಯನ್ನು ತಿರಸ್ಕರಿಸಿದೆ.
ರೆಡ್ಡಿ ಜಾಮೀನಿಗಾಗಿ ಹೈದರಾಬಾದ್ನ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬೇಕು. ಆದರೆ, ಹೈಕೋರ್ಟ್ ಜಾಮೀನು ನೀಡುವವರೆಗೆ ಜೈಲಿನಲ್ಲಿರಬೇಕು. ಇನ್ನು ಶಿಕ್ಷೆಗೆ ತಡೆಯಾಜ್ಞೆ ಸಿಗದಿದ್ದರೆ ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಭೀತಿಯೂ ಇದೆ.
ಆಂಧ್ರ ಪ್ರದೇಶದಲ್ಲಿ ವೈ.ಎಸ್ ರಾಜಶೇಖರ ರೆಡ್ಡಿ ಹಾಗೂ ಕರ್ನಾಟಕದಲ್ಲಿ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಓಬಳಾಪುರಂ ಅಕ್ರಮ ಗಣಿಕಾರಿಕೆ ಪ್ರಕರಣ ಬೆಳಕಿಗೆ ಬಂದಿತ್ತು. ಆಂಧ್ರ-ಕರ್ನಾಟಕದ ಗಡಿಗೆ ಹೊಂದಿಕೊಂಡ ಓಬಳಾಪುರಂ ಬೆಟ್ಟದಲ್ಲಿ ಅದಿರಿನ ಅಕ್ರಮ ಗಣಿಗಾರಿಕೆ ನಡೆದಿದೆ ಎಂದು ಆರೋಪಿಸಲಾಗಿತ್ತು. ಗಣಿಗಾರಿಕೆ ಮಂಜೂರಾತಿ ವೇಳೆ ಇಲಾಖೆಗಳಿಂದ ಅಕ್ರಮವಾಗಿದೆ. ಅರಣ್ಯ ಇಲಾಖೆ, ಗಣಿ ಇಲಾಖೆಯಿಂದ ಅಕ್ರಮ ಆಗಿದೆ ಎಂದು ಆರೋಪಿಸಲಾಗಿತ್ತು. ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 884 ಕೋಟಿ ಅಕ್ರಮ ಎಸಗಿರೋದು ಸಾಬೀತಾಗಿದೆ. ಒಟ್ಟು 29 ಲಕ್ಷ ಟನ್ ಅದಿರು ಲೂಟಿ ಮಾಡಿರುವ ಆರೋಪ ಇವರ ಮೇಲಿದೆ. ಈಗಾಗಲೇ ಇದೇ ಪ್ರಕರಣದಲ್ಲಿ ಮೂರೂವರೇ ವರ್ಷ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಆಚೆ ಬಂದಿದ್ದಾರೆ.