Uncategorized

ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗಳಿಗೆ 8 ಮಂದಿ ಪತ್ರಕರ್ತರು ಆಯ್ಕೆ.

ಮಡಿಕೇರಿ:- ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಅತ್ಯುತ್ತಮ ವರದಿಗಳಿಗೆ ನೀಡಲಾಗುವ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗಳಿಗೆ 8 ಮಂದಿ ಪತ್ರಕರ್ತರು ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಕೆ.ಕೆ.ನಾಗರಾಜ ಶೆಟ್ಟಿ ಅವರ ”ಜಿಲ್ಲೆಯಲ್ಲಿ ಮುಚ್ಚುವ ಹಂತಕ್ಕೆ ತಲುಪಿರುವ ರೇಷ್ಮೆ ಇಲಾಖೆ” ಎಂಬ ವರದಿ ಆಯ್ಕೆಯಾಗಿದೆ.

ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ಚಂದ್ರಮೋಹನ್ ಅವರ ”ಹಾರಂಗಿ ಅಣೆಕಟ್ಟೆ ಅಂಚಿನಲ್ಲಿ ಗಣಿಗಾರಿಕೆ ತಂದಿರುವ ಆತಂಕ” ಎಂಬ ವರದಿ ಆಯ್ಕೆಯಾಗಿದೆ. ಅತ್ಯುತ್ತಮ ರಾಜಕೀಯ ವರದಿ ಪ್ರಶಸ್ತಿಗೆ ಜಯಪ್ರಕಾಶ್ ಅವರ ”ಬಿಜೆಪಿಯ ಅಸಮಾಧಾನವೇ ಕಾಂಗ್ರೆಸ್‌ಗೆ ವರದಾನ” ಎಂಬ ವರದಿ ಆಯ್ಕೆಯಾಗಿದೆ.

ಅತ್ಯುತ್ತಮ ಸಹಕಾರ ಸಂಘ ಬಗ್ಗೆ ವರದಿ ಪ್ರಶಸ್ತಿಗೆ ಕೆ.ಬಿ.ಶಂಶುದ್ದೀನ್ ಅವರ ”ಹಿರಿಯರಿಗೆ ಕಿರಿಯರ ಸವಾಲು” ವರದಿ ಆಯ್ಕೆಯಾಗಿದೆ. ನೊಂದವರ ಪರ ವರದಿ ಪ್ರಶಸ್ತಿಗೆ ಟಿ.ಆರ್.ಪ್ರಭುದೇವ್ ಅವರ ”ಪ್ಲಾಸ್ಟಿಕ್ ಹೊದಿಕೆಯ ಗುಡಿಸಲೇ ಇವರಿಗೆ ಅರಮನೆ” ವರದಿ ಆಯ್ಕೆಯಾಗಿದೆ. ಅತ್ಯುತ್ತಮ ಕ್ರೀಡಾ ವರದಿಗೆ ವಿನೋದ್ ಅವರ ”ಕುಶಾಲನಗರಕ್ಕಿಲ್ಲ ಕ್ರೀಡಾಂಗಣ” ಎಂಬ ಸುದ್ದಿ ಆಯ್ಕೆ ಆಗಿದೆ.

ಪಾರಂಪರಿಕ ನಾಟಿ ವೈದ್ಯ ವರದಿ ಪ್ರಶಸ್ತಿಗೆ ಚೈತನ್ಯ ಚಂದ್ರಮೋಹನ್ ಅವರ ವಿಶೇಷ ಲೇಖನ ”ಮಕ್ಕಳ ಪಾಲಿನ ಸಂಜೀವಿನಿ ಲೀಲಾವತಿ ಗಣಪತಿ” ಆಯ್ಕೆಯಾಗಿದೆ. ಸಾಮಾಜಿಕ ಕಳಕಳಿಯ ವರದಿ ಪ್ರಶಸ್ತಿಗೆ ಕೆ.ಜೆ. ಶಿವರಾಜ್ ಅವರ ”ಇಂದಿರಾ ಬಡಾವಣೆಯ ರಸ್ತೆ ಅವ್ಯವಸ್ಥೆ” ವರದಿ ಆಯ್ಕೆಯಾಗಿದೆ.

ಜೂನ್ 19ರಂದು ಕುಶಾಲನಗರದಲ್ಲಿ ನಡೆಯುವ ತಾಲೂಕು ಸಂಘದ ವಾರ್ಷಿಕ ಮಹಾಸಭೆ ಮತ್ತು ದತ್ತಿ ನಿಧಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವನಿತಾ ಚಂದ್ರಮೋಹನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.