ಬೆಂಗಳೂರು

ವಿಧಾನ ಪರಿಷತ್ತಿಗೆ ಡಾ.ಆರತಿಕೃಷ್ಣ ಸೇರಿದಂತೆ ನಾಲ್ವರ ಹೆಸರು ಅಂತಿಮಗೊಳಿಸಿದೆ.

ಬೆಂಗಳೂರು:- ವಿಧಾನ ಪರಿಷತ್ತಿಗೆ ನಾಲ್ವರ ಹೆಸರುಗಳನ್ನು ರಾಜ್ಯ ಸರ್ಕಾರ ಅಂತಿಮಗೊಳಿಸಿದೆ. ಅನಿವಾಸಿ ಭಾರತೀಯ ಸೇವೆ, ಮಹಿಳಾ, ಸಮಾಜ ಸೇವೆ ಕೋಟಾದಡಿ ಶ್ರೀಮತಿ ಡಾ.ಆರತಿ ಕೃಷ್ಣರವರು, ಶಿಕ್ಷಣ, ಸಹಕಾರ ಕ್ಷೇತ್ರದ ಕೋಟಾದಡಿ ಕೆಪಿಸಿಸಿ ವಕ್ತಾರ ರಮೇಶ್ ಬಾಬು, ಪತ್ರಕರ್ತರ ಕೋಟಾದಡಿ ದಿನೇಶ್ ಅಮೀನ್ ಮಟ್ಟು ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಡಿ.ಜಿ ಸಾಗರ್ ಹೆಸರುಗಳನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ.

ಈ ನಾಲ್ವರನ್ನು ಪರಿಷತ್ ಗೆ ನಾಮನಿರ್ದೇಶನ ಎಂದು ಸಿದ್ದರಾಮಯ್ಯ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ, ಖಾಲಿ ಇರುವ ಪರಿಷತ್ ನ ನಾಲ್ಕು ಸ್ಥಾನಗಳಿಗೆ ಅಂದಾಜು 50 ಕಾಂಗ್ರೆಸ್ ನಾಯಕರು ತೀವ್ರ ಲಾಬಿ ನಡೆಸಿದ್ದರು.

ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಸದಸ್ಯರ ಪೈಕಿ ಯು.ಬಿ.ವೆಂಕಟೇಶ್‌, ಪ್ರಕಾಶ್‌ ರಾಥೋಡ್‌, ಸಿ.ಪಿ.ಯೋಗೇಶ್ವರ್‌ (ರಾಜೀನಾಮೆ) ಹಾಗೂ ತಿಪ್ಪೇಸ್ವಾಮಿ ಅವರ ಅವಧಿ ಜನವರಿ ವೇಳೆಗೆ ಮುಕ್ತಾಯಗೊಂಡಿತ್ತು. ಆಕಾಂಕ್ಷಿಗಳಿಂದ ತೀವ್ರ ಒತ್ತಡ ಇದ್ದರೂ ಖಾಲಿ ಇರುವ ಸ್ಥಾನಗಳಿಗೆ ಜನವರಿಯಿಂದ ಈವರೆಗೆ ಸದಸ್ಯರನ್ನು ಅಂತಿಮಗೊಳಿಸಲು ಸರ್ಕಾರ ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ಆಸಕ್ತಿ ತೋರಿರಲಿಲ್ಲ.

ಇದೀಗ ನಾಮನಿರ್ದೇಶನ ಮಾಡಿ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ಕಳುಹಿಸಿದ್ದಾರೆ, ರಾಜ್ಯದ ಎನ್‌ಆರ್‌ಐ ಫೋರಂ ಉಪಾಧ್ಯಕ್ಷರು ಹಾಗೂ ಎಐಸಿಸಿ ಸಾಗರೋತ್ತರ ಸಮಿತಿ ಕಾರ್ಯದರ್ಶಿಗಳಾಗಿರುವ ಡಾ.ಆರತಿ ಕೃಷ್ಣ ಅವರನ್ನು ಹೈಕಮಾಂಡ್‌ ಕೋಟಾದಲ್ಲಿ ನಾಮನಿರ್ದೇಶನ ಮಾಡಲಾಗಿದೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲದಿಂದಾಗಿ ದಲಿತ ಮುಖಂಡ ಡಿ.ಜಿ.ಸಾಗರ್‌ ಅವರ ಹೆಸರು ಅಂತಿಮಗೊಳಿಸಿದ್ದು, ಕೆಪಿಸಿಸಿ ಕೋಟಾದಲ್ಲಿ ರಮೇಶ್ ಬಾಬು ಅವರಿಗೆ ಅವಕಾಶ ನೀಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅ‍ವರ ಶಿಫಾರಸಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಹಿಂದಿನ ಅವಧಿಗೆ ಮಾಧ್ಯಮ ಸಲಹೆಗಾರರಾಗಿದ್ದ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅವರಿಗೆ ಅವಕಾಶ ನೀಡಲಾಗಿದೆ.

ನಾಲ್ಕೂ ಮಂದಿ ಸದಸ್ಯರ ಪೈಕಿ ಆರತಿ ಕೃಷ್ಣ ಅವರು ಒಕ್ಕಲಿಗ, ರಮೇಶ್ ಬಾಬು ಹಾಗೂ ದಿನೇಶ್ ಅಮಿನ್‌ಮಟ್ಟು ಅವರು ಹಿಂದುಳಿದ ವರ್ಗ, ಡಿ.ಜಿ.ಸಾಗರ್‌ ಅವರು ದಲಿತ ಸಮುದಾಯಕ್ಕೆ ಸೇರಿದವರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ವಿನಯ್‌ ಕಾರ್ತಿಕ್‌ ಹಾಗೂ ಬಿ.ಎಲ್‌.ಶಂಕರ್‌ ಅವರ ಹೆಸರು ಶಿಫಾರಸು ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿ.ಎಲ್‌.ಶಂಕರ್‌ ಹಾಗೂ ದಿನೇಶ್ ಅಮಿನ್‌ಮಟ್ಟು ಅವರ ಪರ ಬ್ಯಾಟ್‌ ಬೀಸಿದ್ದರು. ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರು ಶಿಫಾರಸು ಮಾಡಿದ್ದ ಇಬ್ಬರಿಗೂ ಮಣೆ ಹಾಕಿಲ್ಲ. ಸಿದ್ದರಾಮಯ್ಯ ಅವರ ಸೂಚಿಸಿದ್ದ ಎರಡರಲ್ಲಿ ಒಂದು ಹೆಸರು ಅಂತಿಮಗೊಳಿಸಿದೆ. ಉಳಿದ ಮೂರು ಸ್ಥಾನಗಳು ಹೈಕಮಾಂಡ್‌ ಕೋಟಾದಡಿ ಅಂತಿಮಗೊಂಡಿರುವುದು ಕುತೂಹಲ ಮೂಡಿಸಿದೆ.