Uncategorized

ವಿಧಾನ ಪರಿಷತ್: ಗೊಂದಲಗಳ ಹಿನ್ನೆಲೆ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ.!

ದೆಹಲಿ:- ವಿಧಾನ ಪರಿಷತ್ತಿಗೆ ಸೂಚಿಸಿದ್ದ 4 ಹೆಸರುಗಳ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಕಲಬುರಗಿಯ ದಲಿತ ಮುಖಂಡ ಡಿ.ಜಿ. ಸಾಗರ್‌ ಹೆಸರು ಪಟ್ಟಿಯಲ್ಲಿ ಹೇಗೆ ಬಂತು ಎಂಬುದು ದೆಹಲಿಯ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆಯಾಗಿದೆ.

ಮಂಗಳವಾರ ದಿಲ್ಲಿಯಲ್ಲಿ ವರಿಷ್ಠರೊಂದಿಗೆ ನಡೆದ ಸಭೆಯಲ್ಲಿ ಈ ಬಗ್ಗೆ ಸಮಾಲೋಚನೆ ಆಗಿದ್ದು ನಾಮನಿರ್ದೇಶನ ಸದ್ಯಕ್ಕೆ ಬೇಡ ಎಂಬ ಸ್ಪಷ್ಟ ಸಂದೇಶವನ್ನು ಸಿಎಂ ಹಾಗೂ ಡಿಸಿಎಂಗೆ ನೀಡಿರುವುದೂ ಅಲ್ಲದೆ, ಶಿಫಾರಸು ಮಾಡಿದ್ದ ಪಟ್ಟಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದೆ. ಪರಿಷ್ಕೃತ ಪಟ್ಟಿ ಸಲ್ಲಿಸುವಂತೆ ಹೈಕಮಾಂಡ್‌ ಸಿಎಂಗೆ ಸೂಚಿಸಿದೆ.

ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ವಿರುದ್ಧ ರಾಜ್ಯಪಾಲರಿಗೆ ಈಗಾಗಲೇ 2 ದೂರುಗಳು ತಲುಪಿವೆ. ಅದೇ ರೀತಿ ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ವಿರುದ್ಧವೂ ಒಂದು ದೂರು ಸಲ್ಲಿಕೆಯಾಗಿದೆ. ಆರತಿ ಕೃಷ್ಣ ಈಗಾಗಲೇ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆಯಾಗಿದ್ದಾರೆ. ರಮೇಶ್‌ ಬಾಬು ಹಾಗೂ ಡಿ.ಜಿ.ಸಾಗರ್‌ ಇತ್ತೀಚೆಗಷ್ಟೇ ಪಕ್ಷ ಸೇರಿದ್ದರೂ ಮಣೆ ಹಾಕಿದ್ದರ ಬಗ್ಗೆ ಹೈಕಮಾಂಡ್‌ಗೆ ಸಾಕಷ್ಟು ದೂರುಗಳು ಹೋಗಿವೆ. ಎಲ್ಲಕ್ಕಿಂತ ಮಿಗಿಲಾಗಿ ಸಾಗರ್‌ ಹೆಸರು ಪಟ್ಟಿಯಲ್ಲಿ ಹೇಗೆ ಬಂತು ಎಂದು ಹೈಕಮಾಂಡ್‌ ತಲೆಬಿಸಿ ಮಾಡಿಕೊಂಡಿದೆ.

ಕಲಬುರಗಿ ಜಿಲ್ಲೆಯ ದಲಿತ ಮುಖಂಡ ಎಂಬ ಕಾರಣಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಡಿ.ಜಿ.ಸಾಗರ್‌ ಹೆಸರು ಸೂಚಿಸಿರಬಹುದು ಎನ್ನಲಾಗಿದೆ. ಆದರೆ, ಖರ್ಗೆಯವರ ಹೆಸರು ಮುಂದಿಟ್ಟುಕೊಂಡು ಸಿಎಂ ಮತ್ತು ಡಿಸಿಎಂ ಅವರೇ ಪಟ್ಟಿಯಲ್ಲಿ ಸಾಗರ್‌ ಹೆಸರು ಸೇರಿಸಿರಬಹುದು ಎಂದು ಮೂಲಗಳು ಹೇಳಿವೆ. ಈ ಗೊಂದಲಗಳ ಹಿನ್ನೆಲೆಯಲ್ಲಿ ಆಯ್ಕೆ ಪಟ್ಟಿಗೆ ತಾತ್ಕಾಲಿಕ ತಡೆ ನೀಡಿದೆ.